
ಜ.14 ರಿಂದ 18 ರವರೆಗೆ ಭಂಡೂರು ಜಾತ್ರಾ ಮಹೋತ್ಸವ
Tuesday, January 7, 2025
ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಚಿಕ್ಕನಕೋಡು ಪಂಚಾಯತಿಯ ಹೇರಾವಲಿ ಗ್ರಾಮದಲ್ಲಿರುವ ಭಂಡೂರೇಶ್ವರಿ ದೇವಿ ದೇವಾಲಯದ ಜಾತ್ರಾ ಮಹೋತ್ಸವವು ಜ.14 ರಿಂದ ಆರಂಭಗೊಂಡು ಜ.18 ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳ ಅನುಗ್ರಹದೊಂದಿಗೆ ನಡೆಯಲಿದೆ.
ಜ. 14 ರಂದು ಬೆಳಿಗ್ಗೆ ದೇವಾಲಯ ಸ್ಥಳ ಶುದ್ದೀಕರಣ, ಪಂಚಗವ್ಯ ಹವನ, ಗಣ ಹವನ, ಶ್ರೀದೇವಿಗೆ ವಿಶೇಷ ಅಲಂಕಾರ, ಪೂಜೆ, ಶ್ರೀದೇವಿಯ ಪಲ್ಲಕ್ಕಿ ಉತ್ಸವ, ಜಾತ್ರಾ ಮಹೋತ್ಸವದ ಗದ್ದುಗೆಯಲ್ಲಿ ಶ್ರೀದೇವಿಯ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ.
ಜ.15 ರಂದು ಬೆಳಿಗ್ಗೆ ಗಣಪತಿ ಪೂಜೆ, ಶ್ರೀದೇವಿಗೆ ವಿಶೇಷ ಪೂಜೆ, ಧರ್ಮ ಧ್ವಜ ಸ್ತಂಭ ಸ್ಥಾಪನೆ, ಗದ್ದುಗೆ ಪೂಜೆ, ಶ್ರೀದೇವಿ ಗದ್ದುಗೆ ಆರೋಹಣ, ಕಲಶ ಸ್ಥಾಪನೆ, ಪಲ್ಲಕ್ಕಿ ಉತ್ಸವ ನಡೆಯಲಿದೆ.
ಜ.16 ರಂದು ಬೆಳಿಗ್ಗೆ ಕಲಶ ಸ್ಥಾಪನೆ, ಶ್ರೀದೇವಿಯ ಆವಾಹನೆ, ದೇವರಿಗೆ ಹೂವಿನ ಅಲಂಕಾರ ಮತ್ತು ಮಹಾಪೂಜೆ, ಸಂಜೆ ಅಗ್ನಿಪೂಜೆ ಕಳಶೋತ್ಸವ, ಕೆಂಡಸೇವೆ, ಭೂತಾರಾಧನೆ, ದೈವಕೋಲ, ಪಲ್ಲಕ್ಕಿ ಉತ್ಸವ, ಶ್ರೀದೇವಿಯ ಲಾಲಕ್ಕಿ ಉತ್ಸವ, ಓಕುಳಿ, ಭಜನಾ ಕಾರ್ಯಕ್ರಮ ನಡೆಯಲಿದೆ.
ಜ.17 ರಂದು ಬೆಳಿಗ್ಗೆ ಶ್ರೀದೇವಿಗೆ ವಿಶೇಷ ಪೂಜೆ ಸೇವೆ , ಭಜನಾ ಕಾರ್ಯಕ್ರಮ, ಬಲಿ ಪೂಜೆ, ಹರಕೆ ಹೇಳಿಕೆ ಸೇವೆ ನಡೆಯಲಿದೆ.
ಜ.18 ರಂದು ಬೆಳಿಗ್ಗೆ ಶ್ರೀದೇವಿಗೆ ವಿಶೇಷ ಅಲಂಕಾರ ಪೂಜೆ, ಗುರುಪೂಜೆ, ಶ್ರೀ ಅನ್ನಪೂರ್ಣೇಶ್ವರಿ ಪೂಜೆ, ಭಿಕ್ಷಾಟನೆ ಕಾರ್ಯಕ್ರಮ, ಸಂಜೆ ಭಜನೆ ಹಾಗೂ ಶ್ರೀದೇವಿಯ ಉತ್ಸವ ಮೂರ್ತಿಯ ಅದ್ದೂರಿ ಮೆರವಣಿಗೆ ಮೂಲಕ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಭಂಡೂರೇಶ್ವರಿ ದೇವಾಲಯದ ಆಡಳಿತ ಮಂಡಳಿಯ ಧರ್ಮದರ್ಶಿ ಪ್ರಶಾಂತ್ ಭಂಡೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಪ್ರತಿ ದಿನ ಮಧ್ಯಾಹ್ನ 'ಅನ್ನ ಸಂತರ್ಪಣೆ' ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿರುವುದು. ದೇವಾಲಯದ ಜಾತ್ರಾ ಮಹೋತ್ಸವಕ್ಕೆ ಹೊರೆ ಕಾಣಿಕೆ ಅಥವಾ ಧನ ಸಹಾಯ ನೀಡುವವರು ದೇವಳದ ಮೊಬೈಲ್ ಸಂಖ್ಯೆ: 9449990595, 81977 90595 ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದು ಕೊಳ್ಳಬಹುದೆಂದು ಪ್ರಕಟಣೆ ತಿಳಿಸಿದೆ.