
ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಹಬ್ಬಕ್ಕೆ ಚಾಲನೆ
ಕಾರ್ಕಳ: ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಹಬ್ಬವು, ಸಂತ ಲಾರೆನ್ಸ್ ಅವರ ಅದ್ಭುತ ಪ್ರತಿಮೆಯನ್ನು ಚರ್ಚ್ ಸುತ್ತಲೂ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಸಾರ್ವಜನಿಕ ವೀಕ್ಷಣೆಗಾಗಿ ವೇದಿಕೆಯ ಮೇಲೆ ಇಡುವ ಮೂಲಕ ಹಬ್ಬ ಉತ್ಸಾಹದಿಂದ ಪ್ರಾರಂಭವಾಯಿತು.
ವಂ.ಸ್ವಾಮಿ. ಜಿತೇಶ್ ಕ್ಯಾಸ್ತೆಲಿನೊ ಬೆಳಿಗ್ಗೆ 7.30ಕ್ಕೆ ಮೊದಲ ಬಲಿಪೂಜೆಯನ್ನು ಅರ್ಪಿಸಿದರು, ನಂತರ ಎಲ್ಲಾ ಯಾತ್ರಿಕರ ಸುರಕ್ಷತೆಗಾಗಿ ಮತ್ತು ಎಲ್ಲಾ ಕಾರ್ಯಕ್ರಮಗಳ ಯಶಸ್ಸಿಗಾಗಿ ಭಗವಂತನ ಆಶೀರ್ವಾದವನ್ನು ಕೋರಿ ಒಂದು ಗಂಟೆ ಆರಾಧನ ವಿಧಿಯನ್ನು ನೆರವೇರಿಸಿದರು. ಇದರ ನಂತರ ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಅವರು ಹಬ್ಬದ ಧ್ವಜವನ್ನು ಹಾರಿಸಿದರು.
ಪಾಲನ ಮಂಡಳಿಯ ಉಪಾಧ್ಯಕ್ಷ ಸಂತೋಷ್ ಡಿಸಿಲ್ವ ಅವರು ಸಂದೇಶ ನೀಡುವ ಮುಖೇನ ಹಬ್ಬ ಹರಿದಿನಗಳ ಆಚರಣೆಗಳಿಗೆ ಶುಭ-ಹಾರೈಸಿದರು. ಬೆಳಿಗ್ಗೆ 10.30ಕ್ಕೆ ಜೆರಾಲ್ಡ್ ಐಸಾಕ್ ಲೋಬೊ ಬಲಿಪೂಜೆಯನ್ನು ಅರ್ಪಿಸಿದರು.
ಬಲಿದಾನದ ಕೊನೆಯಲ್ಲಿ ಕೈಯಲ್ಲಿ ಬರೆದ ಬೈಬಲ್, ಮಕ್ಕಳಿಗಾಗಿ ಸಂತರ ಪುಸ್ತಕ ಮತ್ತು ವಂ. ಸ್ವಾಮಿ. ಲೂಯಿಸ್ ಡೇಸಾ ಬರೆದ ಶಿಲುಬೆಯ ಮಾರ್ಗ ಪುಸ್ತಕವನ್ನು ಬಿಷಪ್ ಬಿಡುಗಡೆ ಮಾಡಿದರು. ಉಳಿದ ಪೂಜೆಗಳನ್ನು ಧರ್ಮಗುರು ಫಾದರ್ ಅನಿಲ್ ಕ್ರಾಸ್ತಾ, ಕ್ಯಾರಿತಾಸ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಫಾದರ್ ಪ್ರಕಾಶ್ ಲೋಬೊ, ಸೈಂಟ್ ಆನ್ಸ್ ಫ್ರೈರಿ, ಮಂಗಳೂರು, ಫಾದರ್ ಡಾ. ಪ್ರವೀಣ್ ಜಾಯ್ ಸಲ್ಡಾನ್ಹಾ, ಸೈಂಟ್ ಜೋಸೆಫ್ಸ್ ಸೆಮಿನರಿ, ಮಂಗಳೂರು, ಫಾದರ್ ಐವನ್ ಡಿ’ಸೋಜಾ, ಸೈಂಟ್ ಜೋಸೆಫ್ಸ್ ಸೆಮಿನರಿ, ಮಂಗಳೂರು, ಫಾದರ್ ವಾಲ್ಟರ್ ಡಿ’ಸೋಜಾ, ಬೆಂದೂರು ಚರ್ಚಿನ ಧರ್ಮಗುರುಗಳು, ಅ.ವಂ. ರೋಶನ್ ಡಿಸೋಜಾ, ಉಡುಪಿ ಧರ್ಮಕ್ಷೇತ್ರದ ಕುಲಪತಿ ಇವರು ಆಚರಿಸಿದರು.
ಇಂದು ದೇವರ ವಾಕ್ಯದ ಭಾನುವಾರ ಆದುದ್ದರಿಂದ. ಬೈಬಲ್ಲನ್ನು ಧೂಪ ಮತ್ತು ಹಾರ ಹಾಕಿ ಗೌರವಿಸಲಾಯಿತು. ಜುಬಿಲಿ 2025ರ ವಿಷಯ ‘ಭರವಸೆ ನಮ್ಮನ್ನು ನಿರಾಶೆಗೊಳಿಸುವುದಿಲ್ಲ’ ಎಂಬುದರ ಬಗ್ಗೆ ಬಲಿಪೂಜೆಯಲ್ಲಿ ಎಲ್ಲಾ ಗುರುಗಳು ಬಹಳ ಚಿಂತನಶೀಲ ಪ್ರವಚನಗಳನ್ನು ಬೋಧಿಸಿದರು. ಭಾನುವಾರ ಮತ್ತು ಭಾರತದ ಗಣರಾಜ್ಯೋತ್ಸವ ದಿನವಾದ್ದರಿಂದ ಬೆಳಗಿನ ಜಾವದಿಂದ ತಡರಾತ್ರಿಯವರೆಗೆ ಸಾವಿರಾರು ಜನರು ದೇವಾಲಯಕ್ಕೆ ಆಗಮಿಸಿದರು. ಇಪ್ಪತ್ತಕ್ಕೂ ಹೆಚ್ಚು ಗುರುಗಳು ಪಾಪಕ್ಷಮಾಪಣೆಯನ್ನು ಗೈದರು. ಇದು ಜುಬಿಲಿ ವರ್ಷವಾಗಿದ್ದರಿಂದ ಮತ್ತು ಈ ದೇವಾಲಯವನ್ನು ವಿಶೇಷ ಆರ್ಶೀವಾದಗಳನ್ನು ಪಡೆಯುವ ಪವಿತ್ರ ಸ್ಥಳವೆಂದು ಘೋಷಿಸಲಾಗಿರುವುದರಿಂದ, ಧರ್ಮ ಮತ್ತು ಜಾತಿಗಳನ್ನು ಲೆಕ್ಕಿಸದೆ ಭಕ್ತಾಧಿಗಳು ಬಸಿಲಿಕಾಕ್ಕೆ ಭೇಟಿ ನೀಡಿ ಸಂತ ಲಾರೆನ್ಸಾರಿಗೆ ಭಕ್ತಿಯಿಂದ ಪ್ರಾರ್ಥನೆಯನ್ನು ಸಲ್ಲಿಸಿದರು.
ಇಂದಿನ ಬಲಿಪೂಜೆಗಳಲ್ಲಿ ಎಲ್ಲಾ ಮಕ್ಕಳಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಕೊನೆಯ ಬಲಿಪೂಜೆಯನ್ನು ರಾತ್ರಿ 8 ಗಂಟೆಗೆ ನಡೆಸಲಾಯಿತು. ಸೋಮವಾರ, ಕೆಲಸದ ದಿನವಾದ್ದರಿಂದ ಕೇವಲ ಮೂರು ಬಲಿಪೂಜೆಗಳನ್ನು ಮಾತ್ರ ಆಚರಿಸಲಾಗುತ್ತದೆ ಮತ್ತು ಈ ಬಲಿಪೂಜೆಗಳ ಸಮಯದಲ್ಲಿ ರೋಗಿಗಳು ಮತ್ತು ಬಳಲುತ್ತಿರುವವರ ಉದ್ದೇಶಗಳಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗುವುದು.