
ಫೆ.1 ರಂದು ಕುಂದಾಪುರ ಶ್ರೀ ಮಹಾಕಾಳಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮಹೋತ್ಸವ
ಕುಂದಾಪುರ: ಇಲ್ಲಿನ ಖಾರ್ವಿಕೇರಿ ರಸ್ತೆಯಲ್ಲಿರುವ ಶ್ರೀ ಮಹಾಕಾಳಿ ದೇವಸ್ಥಾನದ 35ನೇ ವರ್ಷದ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ಫೆ.1 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಜ.31 ರಂದು ದೇವಳದಲ್ಲಿ ಸಂಜೆ 6 ಗಂಟೆಯಿಂದ ಮಧ್ಯಾಹ್ನ, ವಾಸ್ತು ಪೂಜೆ, ವಾಸ್ತು ಬಲಿ, ರಾಕ್ಷೋಘ್ನ ಹೋಮ, ಕಲಾಭಿವೃದ್ಧಿ ಹೋಮ, ಬ್ರಹ್ಮಕಲಶ ಸ್ಥಾಪನೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
ರಾತ್ರಿ 7 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ 8 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಊರ-ಪರವೂರ ಭಜನಾ ತಂಡಗಳಿಂದ ವಿಶೇಷ ಭಜನಾ ಜುಗಲ್ ಬಂದಿ ಕಾರ್ಯಕ್ರಮ ನಡೆಯಲಿದೆ.
ಫೆ.1 ರಂದು ಬೆಳಗ್ಗೆ ಗಣಪತಿ ಪೂಜೆ, ಮಹಾ ಸಂಕಲ್ಪ, ಪುಣ್ಯಾಹ, ಅಧಿವಾಸ ಹೋಮ, ಅಶ್ವಥ ವೃಕ್ಷ ಪೂಜೆ, "ಚಂಡಿಕಾ ಹೋಮ" "ಬ್ರಹ್ಮ ಕಲಶಾಭಿಷೇಕ", ಶ್ರೀನಾಗ ದೇವರಿಗೆ ಕಲಾಭಿವೃದ್ಧಿ ಹೋಮ, ಕಲಶಾಭಿಷೇಕ ನಂತರ ಮಹಾಪೂಜೆ, ಮಂತ್ರಾಕ್ಷತೆ, "ಪಲ್ಲಪೂಜೆ", ತೀರ್ಥ ಪ್ರಸಾದ ವಿತರಣೆ. ಮಧ್ಯಾಹ್ನ 1 ಗಂಟೆಗೆ ಸೇವಾ ಕರ್ತರಿಂದ ಸಾರ್ವಜನಿಕ "ಮಹಾ ಅನ್ನ ಸಂತರ್ಪಣೆ" ಕಾರ್ಯಕ್ರಮ ನಡೆಯಲಿದೆ.
ಸಂಜೆ 5 ಗಂಟೆಗೆ ಅಮ್ಮನವರಿಗೆ "ವಿಶೇಷ ರಂಗಪೂಜೆ", ಮಹಾ ಮಂಗಳಾರತಿ. ರಾತ್ರಿ 6:30 ಕ್ಕೆ ವಾರ್ಷಿಕವಾಗಿ ಜರುಗುವ ಅಮ್ಮನವರ ಪುಷ್ಪಾಲಂಕೃತ ಪಲ್ಲಕ್ಕಿ ಉತ್ಸವದ ಪುರ ಮೆರವಣಿಗೆಯು ಕುಂದಾಪುರ ಮುಖ್ಯರಸ್ತೆ ಮಾರ್ಗವಾಗಿ ಸಾಗಿ, ಪಾರಿಜಾತ ಸರ್ಕಲ್‌ನಿಂದ ತಿರುಗಿ, ಶ್ರೀ ನಾಗ ಜಟ್ಟಿಗೇಶ್ವರ ದೇವಸ್ಥಾನ, ಖಾರ್ವಿ- ಮೇಲ್ಕೇರಿಗೆ ತೆರಳಿ ಅಲ್ಲಿ ವಿಶೇಷ ಪೂಜೆ, ಪ್ರಸಾದ ವಿತರಣೆ ಯೊಂದಿಗೆ, ಸಂಪ್ರೋಕ್ಷಣೆ ಗೊಳ್ಳಲಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದೆ.