
ಕೋಟ ಮಣೂರಿನಲ್ಲಿ ಹೆಜ್ಜೇನು ದಾಳಿ: ಇಬ್ಬರು ಮಹಿಳೆಯರು ಸೇರಿ 8 ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು
Wednesday, January 29, 2025
ಕುಂದಾಪುರ: ಕೋಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಣೂರಿನಲ್ಲಿ ಹೆಜ್ಜೇನು ದಾಳಿಯಿಂದ ಇಬ್ಬರು ಮಹಿಳೆಯರೂ ಸೇರಿ ಎಂಟು ಮಂದಿ ಗಂಭೀರ ಗಾಯಗೊಂಡ ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ನಾಗಬನವೊಂದರಲ್ಲಿ ಸರ್ಪಸಂಸ್ಕಾರ ಕಾರ್ಯಕ್ರಮ ನಡೆಯುತ್ತಿತ್ತು. ಹೋಮ ಮಾಡುವುದಕ್ಕಾಗಿ ಹೋಮಕುಂಡಕ್ಕೆ ಬೆಂಕಿ ಹತ್ತಿಸಿದ ಸಂದರ್ಭ ಈ ಘಟನೆ ನಡೆದಿದೆ. ಬನದ ಸಮೀಪವಿರುವ ಮರದಲ್ಲಿ ಗೂಡು ಕಟ್ಟಿದ್ದ ಹೆಜ್ಜೇನುಗಳು ಹೋಮದ ಹೊಗೆಯಿಂದ ಕೆರಳಿ ಸ್ಥಳದಲ್ಲಿದ್ದವರ ಮೇಲೆ ಏಕಾಏಕಿ ದಾಳಿ ನಡೆಸಿದವು.
ಈ ದಾಳಿಯಿಂದ ಇಬ್ಬರು ಮಹಿಳೆಯರು ಹಾಗೂ ಐವರು ಪುರುಷರು ಗಾಯಗೊಂಡಿದ್ದಾರೆ. ರಕ್ಷಣೆಗೆ ಧಾವಿಸಿಬಂದ ಸ್ಥಳೀಯರಾದ ಸಮಾಜ ಸೇವಕ ವಸಂತ ಸುವರ್ಣ ಅವರಿಗೂ ಹೆಜ್ಜೇನು ಕಚ್ಚಿದೆ.
ಗಾಯಾಳುಗಳನ್ನು ತಕ್ಷಣ ಜೀವನ್ ಮಿತ್ರ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು.