
ಬೈಂದೂರಿನಲ್ಲಿ ಜಿಜಿಎಮ್‌ವೈ ಯೋಜನೆ ಲೋಕಾರ್ಪಣೆ: ಸಮಾಜ ಸೇವಕರಿಗೆ ಸನ್ಮಾನ
ಕುಂದಾಪುರ: ಬೈಂದೂರಿನ ಸಮಗ್ರ ಅಭಿವೃದ್ಧಿ ದೃಷ್ಟಿಯನ್ನಿಟ್ಟುಕೊಂಡು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಬೈಂದೂರಿನಲ್ಲಿ ನಡೆದ ಕಾರ್ಯಾಗಾರದಲ್ಲಿ ಘರ್ ಘರ್ ಮೋದಿ ಯೋಜನೆ (ಜಿಜಿಎಮ್‌ವೈ) ಲೋಕಾರ್ಪಣೆಗೊಳಿಸಿದರು.
ಕೇಂದ್ರ ಸರ್ಕಾರದ ಯೋಜನೆಗಳನ್ನು ಮನೆಮನೆಗೂ ತಲುಪಿಸುವ ನಿಟ್ಟಿನಲ್ಲಿ ಜಿಜಿಎಮ್‌ವೈ ಯೋಜನೆ ಸಿದ್ಧಪಡಿಸಿದ್ದೇವೆ. ಮೋದಿ ಸರ್ಕಾರದ ಪ್ರತೀ ಯೋಜನೆಗಳ ಬಗ್ಗೆಯೂ ನಮ್ಮ ಕ್ಷೇತ್ರದ ಜನರಿಗೆ ಮಾಹಿತಿ ಇರಬೇಕು ಮತ್ತು ಪ್ರತಿ ಯೋಜನೆಗಳ ಲಾಭವನ್ನೂ ಕ್ಷೇತ್ರದ ಅರ್ಹ ಜನರು ಪಡೆದುಕೊಳ್ಳಬೇಕು ಎಂದು ಶಾಸಕರು ಆಶಯ ವ್ಯಕ್ತಪಡಿಸಿದರು.
ಇದೇ ವೇಳೆ ಕಾರ್ಯಕರ್ತ ಶಾಸಕರ ಕಚೇರಿಗೆ ಕರೆ ಅಥವಾ ಸ್ವತಃ ಬಂದು ಸಂಪರ್ಕಿಸಿ ನೀಡಿದ ದೂರುಗಳನ್ನು ಬಗೆಹರಿಸುವ ಕೆಲಸ ಅವಿರತವಾಗಿ ನಡೆಯುತ್ತಿದೆ. ಇದುವರೆಗೆ ಶಾಸಕರ ಕಾರ್ಯಾಲಯಕ್ಕೆ ಒಟ್ಟು 16,200 ಕ್ಕೂ ಅಧಿಕ ಕರೆಗಳು ಬಂದಿದ್ದು, ಕ್ಷೇತ್ರದ 9000 ಕ್ಕೂ ಅಧಿಕ ಜನರು ಕರೆ ಮಾಡಿದ್ದಾರೆ. ಶಾಸಕರ ಕಚೇರಿ ಸಂಪರ್ಕಿಸಿ ಕ್ಷೇತ್ರದ ಸಮಸ್ಯೆಗಳನ್ನು ನಿರಂತರವಾಗಿ ಶಾಸಕರ ಗಮನಕ್ಕೆ ತಂದ ಬೈಂದೂರು ಕ್ಷೇತ್ರದ ಪ್ರಾಣೇಶ್ ಯಡಿಯಾಳ್, ಚರಣ್ ಬೈಂದೂರು, ಸಿದ್ದೇಶ್ ಯಳಜಿತ್, ಗೋಪಾಲ್ ವಸ್ರೆ, ರಾಘವೇಂದ್ರ ಸುರಭಿ ಅವರನ್ನು ಶಾಸಕರು ಗೌರವಿಸಿ ಸನ್ಮಾನಿಸಿದರು.
ಶಾಸಕರ ಕಚೇರಿಗೆ ಇವರು 200 ಕ್ಕೂ ಅಧಿಕ ಬಾರಿ ಕರೆ ಮಾಡುವ ಮೂಲಕ ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಲ್ಪಟ್ಟಿದ್ದಾರೆ.
ಬೈಂದೂರು ಕ್ಷೇತ್ರದಲ್ಲಿ ಈ ರೀತಿಯ ಹತ್ತು ಸಾವಿರ ಸಾಮಾಜಿಕ ಕಾರ್ಯಕರ್ತರನ್ನು ಗುರುತಿಸಿ, ಜಿಜಿಎಮ್‌ವೈ ಯೋಜನೆ ಮೂಲಕ ಮೋದಿ ಸರ್ಕಾರದ ಎಲ್ಲಾ ಯೋಜನೆಗಳನ್ನು ಕ್ಷೇತ್ರದ ಮನೆಮನೆಗಳಿಗೂ ತಲುಪಿಸುವ ಗುರಿಯನ್ನು ಶಾಸಕ ಗಂಟಿಹೊಳೆ ಹೊಂದಿದ್ದಾರೆ.