ಕರುವಿನ ಬಾಲ ಕತ್ತರಿಸಿದ ಸುದ್ದಿ ನಿಜವಲ್ಲ: ಸುಳ್ಳು ಸುದ್ದಿ ಹರಡಿದವರ ವಿರುದ್ಧ ಸ್ವಯಂ ಪ್ರೇರಿತ ಕೇಸು

ಕರುವಿನ ಬಾಲ ಕತ್ತರಿಸಿದ ಸುದ್ದಿ ನಿಜವಲ್ಲ: ಸುಳ್ಳು ಸುದ್ದಿ ಹರಡಿದವರ ವಿರುದ್ಧ ಸ್ವಯಂ ಪ್ರೇರಿತ ಕೇಸು

ಕುಂದಾಪುರ: ವಸ್ತುಗಳನ್ನು ಮಾರಲು ಮನೆಗೆ ಬಂದವ ಮನೆಯ ಕರುವಿನ ಬಾಲವನ್ನು ಕತ್ತರಿಸಿದ್ದಾನೆ ಎಂಬ ಸುಳ್ಳು ಮಾಹಿತಿಯನ್ನು ಹರಡಿದ ವ್ಯಕ್ತಿಯ ವಿರುದ್ಧ ಕೋಟ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

ಜ.30ರಂದು ಕೋಟ ಪಿಎಸ್‌ಐ ರಾಘವೇಂದ್ರ ಸಿ. ಅವರು ದಾಖಲಿಸಿದ ದೂರಿನ ಪ್ರಕಾರ ಕೋಟ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಾಘವೇಂದ್ರ ಸಿ. ಕರ್ತವ್ಯದಲ್ಲಿದ್ದಾಗ,  ಸಾಮಾಜಿಕ ಮಾಧ್ಯಮ ಮತ್ತು ಇತರ ವೇದಿಕೆಗಳಲ್ಲಿ ದಾರಿತಪ್ಪಿಸುವ ಸಂದೇಶವೊಂದು ಹರಿದಾಡುತ್ತಿರುವ ಬಗ್ಗೆ ಮಾಹಿತಿಯನ್ನು ಪಡೆದರು. ಕೋಟ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ಅದರಲ್ಲಿ ಹೇಳಲಾಗಿತ್ತು. ಬ್ರಹ್ಮಾವರ ತಾಲೂಕಿನ ಗುಂಡ್ಮಿ ಗ್ರಾಮದ ನಾಗೇಶ್ ಮಯ್ಯ ಅವರ ಮನೆಗೆ ವಸ್ತುಗಳನ್ನು ಮಾರಾಟ ಮಾಡಲು ಓರ್ವ ಅಪರಿಚಿತನು ಬಂದಿದ್ದು, ಮನೆಯವರು ಖರೀದಿ ಮಾಡದಿದ್ದುದರಿಂದ ವ್ಯಗ್ರಗೊಂಡು ಆ ಮಾರಾಟಗಾರ ಮನೆಯ ಹೊರಗಿದ್ದ ಕರುವಿನ ಬಾಲವನ್ನು ಕತ್ತರಿಸಿದ್ದಾನೆ ಎಂದು ಸಂದೇಶದಲ್ಲಿ ಸುಳ್ಳಾಗಿ ಹೇಳಲಾಗಿತ್ತು. ಜನವರಿ 28ರಂದು ಈ ಘಟನೆ ನಡೆದಿತ್ತು ಎನ್ನಲಾಗಿದೆ. 

 ನಿಜವಾಗಿ ನಡೆದದ್ದೇನು?: 

ಸುಮಾರು 60 ವರ್ಷ ವಯಸ್ಸಿನ ಗುರುತಿಸಲಾಗದ ವೃದ್ಧ ವ್ಯಕ್ತಿಯೊಬ್ಬರು ನಾಗೇಶ್ ಮಯ್ಯ ಅವರ ಮನೆಗೆ ಭೇಟಿ ನೀಡಿ, ಆರ್ಥಿಕ ಸಹಾಯವನ್ನು ಕೋರಿದರು. ಮಯ್ಯ ಮತ್ತು ಅವರ ಪತ್ನಿ ಅಹಲ್ಯಾ ಹಣ ನೀಡಲು ನಿರಾಕರಿಸಿದಾಗ, ಆ ವ್ಯಕ್ತಿ ಅಲ್ಲಿಂದ ತೆರಳಿದ್ದಾರೆ.

ಅದೇ ದಿನ, ಸಂಜೆ ಸುಮಾರು 4 ಗಂಟೆಗೆ ನಾಗೇಶ್ ಮಯ್ಯ ಅವರು ತಮ್ಮ ಕೊಟ್ಟಿಗೆಯಲ್ಲಿ ಹಸು ಕರೆಯಲು ಸಿದ್ಧತೆ ನಡೆಸುತ್ತಿದ್ದಾಗ,  ಕರುವಿನ  ಬಾಲ ತುಂಡಾಗಿರುವುದು ಕಂಡುಬಂದಿದೆ. ಈ ಕೃತ್ಯವನ್ನು ಮನೆಗೆ ಬಂದಿದ್ದ ಅಪರಿಚಿತನೇ ಮಾಡಿದ್ದು ಎಂದು ಸಾರಾಸಗಟಾಗಿ ಊಹಿಸಿದ ಅವರ ಮಗ ಅನಿಲ್ ಮಯ್ಯ, ಸಾಮಾಜಿಕ ಜಾಲತಾಣಗಳಲ್ಲಿ ಕಲ್ಪಿತ ಸುದ್ದಿಯನ್ನು ಹರಿಯಬಿಟ್ಟರು. ವಾಸ್ತವವಾಗಿ ದನ ಆಕಸ್ಮಿಕವಾಗಿ ಕರುವಿನ ಬಾಲ ತುಳಿದಿದ್ದರಿಂದ ಬಾಲ ತುಂಡಾಗಿತ್ತು. ಸತ್ಯವನ್ನು ಪರಿಶೀಲಿಸದೆ, ಅವರು ಇತರರೊಂದಿಗೆ ಸೇರಿ, ಧರ್ಮಾಂಧ ಮಾರಾಟಗಾರ ಉದ್ದೇಶಪೂರ್ವಕವಾಗಿ ಕರುವಿನ ಬಾಲವನ್ನು ಕತ್ತರಿಸಿದ್ದಾನೆ ಎಂದು ಸುಳ್ಳು ಸುದ್ದಿ ಹರಡಿದ್ದಾರೆ. ನಂತರ ಅವರು ಕತ್ತರಿಸಿದ ಬಾಲದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಅನಗತ್ಯ ಆತಂಕ ಸೃಷ್ಟಿಸಿದ್ದಾರೆ.

ಈ ಕುರಿತು ಪಿಎಸ್‌ಐ ರಾಘವೇಂದ್ರ ಅವರು ತನಿಖೆ ನಡೆಸಿದಾಗ ಈ ಸುದ್ದಿ ಸಾಮಾಜಿಕ ಸಾಮರಸ್ಯವನ್ನು ಕದಡಲು ಮತ್ತು ಸಮುದಾಯದಲ್ಲಿ ಭಯವನ್ನು ಹುಟ್ಟುಹಾಕುವ ಉದ್ದೇಶದಿಂದ ಕಲ್ಪಿಸಲ್ಪಟ್ಟಿದೆ ಎಂಬುದಾಗಿ ತಿಳಿದುಬಂದಿದೆ. ಸುಳ್ಳು ಸುದ್ದಿ ಹರಡಿದವರ ವಿರುದ್ಧ ಇದೀಗ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article