.jpeg)
ಜ.11, 12ರಂದು ನರಿಂಗಾನ ಕಂಬಳೋತ್ಸವಕ್ಕೆ ಮುಖ್ಯಮಂತ್ರಿ: ಯು.ಟಿ. ಖಾದರ್
ಮಂಗಳೂರು: ನರಿಂಗಾನ ಕಂಬಳ ಸಮಿತಿ ಆಶ್ರಯದಲ್ಲಿ ನರಿಂಗಾನ ಗ್ರಾಪಂ ಸಹಕಾರದಲ್ಲಿ ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಮೋರ್ಲ- ಬೋಳದಲ್ಲಿ ತೃತೀಯ ವರ್ಷದ ಹೊನಲು ಬೆಳಕಿನ ಲವ-ಕುಶ ಜೋಡುಕರೆ ‘ನರಿಂಗಾನ ಕಂಬಳೋತ್ಸವ’ ಜ.11, 12ರಂದು ನಡೆಯಲಿದ್ದು, ಈ ಬಾರಿ ವಿಶೇಷ ಆಕರ್ಷಣೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ ಎಂದು ವಿಧಾನಸಭೆ ಸ್ಪೀಕರ್ ಹಾಗೂ ಉಳ್ಳಾಲ ಕ್ಷೇತ್ರದ ಶಾಸಕ ಯು.ಟಿ. ಖಾದರ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.11 ರಂದು ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜ.17 ರಂದು ಸಿಎಂ ದ.ಕ.ಕ್ಕೆ ಆಗಮಿಸುವ ದಿನ ನಿಗದಿ ಆಗಿದ್ದರೂ, ನರಿಂಗಾನ ಕಂಬಳ ಕುರಿತಾಗಿ ವಿಶೇಷ ಆಸಕ್ತಿಯಿಂದ ಆಗಮಿಸಲಿದ್ದಾರೆ. ಸ್ವತಃ ಸಿಎಂ ಬರುವುದರಿಂದ ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ದೊಡ್ಡ ಅನುದಾನ ದೊರಕಬಹುದು, ಕಂಬಳ ಕ್ಷೇತ್ರಕ್ಕೆ ದೊಡ್ಡ ಪ್ರಯೋಜನ ಆಗಬಹುದು ಎಂಬ ನಿರೀಕ್ಷೆ ಇದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನರಿಂಗಾನ ಕಂಬಳ ಕೇವಲ ಎರಡು ವರ್ಷದಲ್ಲಿ ಜಿಲ್ಲೆಯಲ್ಲಿ ನಡೆದ ಸುಮಾರು 24 ಕಂಬಳಗಳ ಪೈಕಿ ಮೂರನೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೋಣಗಳು ಭಾಗವಹಿಸಿದ ದಾಖಲೆಗೆ ಪಾತ್ರವಾಗಿದೆ. ಎಲ್ಲ ವಿಭಾಗದಲ್ಲೂ ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ ಬಹುಮಾನ, ಚಿನ್ನದ ಪದಕ ನೀಡಲಾಗುವುದು. ಕೋಣಗಳ ಯಜಮಾನರಿಗೆ ಬೆಳ್ಳಿಯ ಪದಕ ಹಾಗೂ ಟ್ರೋಫಿ ಕೊಟ್ಟು ಗೌರವಿಸಲಾಗುವುದು. ಓಟಗಾರರಿಗೆ ಪ್ರಶಸ್ತಿ ಪತ್ರದೊಂದಿಗೆ ಬಹುಮಾನ ನೀಡಲಾಗುವುದು ಎಂದರು.
ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉದ್ಘಾಟನೆ ಮಾಡುವರು. ಶ್ರೀಕ್ಷೇತ್ರ ಶಾಂತಿವಳಿಕೆಯ ಪ್ರಧಾನ ತಂತ್ರಿ ವೇ.ಮೂ. ವರ್ಕಾಡಿ ಹೊಸಮನೆ ರಾಜೇಶ್ ತಾಳಿತ್ತಾಯ ದ್ವೀಪ ಪ್ರಜ್ವಲನೆ ಮಾಡುವರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್, ಸಯ್ಯದ್ ಮದನಿ ದರ್ಗಾ ಹಾಗೂ ಕೇಂದ್ರ ಜುಮಾ ಮಸೀದಿ ಉಳ್ಳಾಲದ ಅಧ್ಯಕ್ಷ ಪಿ.ಜಿ. ಹನೀಫ್ ಹಾಜಿ, ಬೋಳ ಸಂತ ಲಾರೆನ್ಸ್ ದೇವಾಲಯದ ಧರ್ಮಗುರು ರೆ.ಫಾ. ಫೆಡ್ರಿಕ್ ಕೊರೆಯ, ಧಾರ್ಮಿಕ, ಸಾಮಾಜಿಕ ರಂಗ ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ನಿನಿದ ಕೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಖಾದರ್ ತಿಳಿಸಿದರು.