
ವಿದ್ಯುತ್ ಶಾರ್ಟ್‌ಸರ್ಕ್ಯೂಟ್: ಮನೆ ಬೆಂಕಿಗಾಹುತಿ
Wednesday, January 8, 2025
ಪುತ್ತೂರು: ವಿದ್ಯುತ್ ಶಾರ್ಟ್ ಸಕ್ಯೂಟ್‌ನಿಂದ ಮನೆಯ ಅಮೂಲ್ಯ ವಸ್ತುಗಳು ಸುಟ್ಟು ಹೋದ ಘಟನೆ ಮಂಗಳವಾರ ರಾತ್ರಿ ಆಲಂಕಾರಿನಲ್ಲಿ ಸಂಭವಿಸಿದೆ. ಕಡಬ ತಾಲೂಕಿನ ಆಲಂಕಾರು ಗ್ರಾಮದ ನೆಕ್ಕಿಲಾಡಿ ವಿನೋದಾ ಎಂಬವರ ಮನೆಯಲ್ಲಿ ಈ ಅವಘಡ ನಡೆದಿದ್ದು, ಮನೆ ಒಳಗಡೆಯಿದ್ದ ವಿದ್ಯುತ್ ಉಪಕರಣಗಳು, ಬಟ್ಟೆ ಸೇರಿದಂತೆ ಚಿನ್ನದ ಒಡವೆಗಳು ಬೆಂಕಿಗೆ ಆಹುತಿಯಾಗಿದೆ.
ಇಬ್ಬರು ಮಕ್ಕಳೊಂದಿಗೆ ಹಂವಿನ ಮನೆಯೊಂದರಲ್ಲಿ ವಾಸ್ತವ್ಯವಿರುವ ವಿನೋದಾ ಅವರ ಮಕ್ಕಳು ತಮ್ಮ ಶಾಲೆಯ ವಾರ್ಷಿಕೋತ್ಸವಕ್ಕೆ ತೆರಳಿದ್ದರು. ವಿನೋದಾ ಅವರೂ ಕೂಡಾ ಸಂಜೆ ತನಕ ಕೂಲಿ ಕೆಲಸ ಮಾಡಿ ರಾತ್ರಿ ಮಕ್ಕಳ ಶಾಲಾ ವಾರ್ಷಿಕೋತ್ಸವಕ್ಕೆ ತೆರಳಿದ್ದರು. ಸುಮಾರು ರಾತ್ರಿ ೮ರ ವೇಳೆಗೆ ಈ ಘಟನೆ ನಡೆದಿದ್ದು, ಸ್ಥಳೀಯರು ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ಮನೆ ಕಡೆ ತೆರಳಿ ಪರಿಶೀಲಿಸಿದಾಗ ಬೆಂಕಿ ಮನೆಯೊಳಗೆ ಆವರಿಸಿರುವುದನ್ನು ಗಮನಿಸಿದ್ದರು.
ತಕ್ಷಣ ಮನೆಯೊಡತಿಗೆ ವಿಚಾರ ತಿಳಿಸಿ ಮನೆ ಬಾಗಿಲು ಮುರಿದು ನೀರು ಹಾಕಿದ್ದರು. ಆದರೆ ಆ ವೇಳೆಗಾಗಲೇ ಮನೆಯ ಸೋಫಾ, ಬಟ್ಟೆ ಬರೆಗಳು ಬೆಂಕಿಗೆ ಆಹುತಿಯಾಗಿತ್ತು. ತಾವು ಹಾಕಿಕೊಂಡಿರುವ ಬಟ್ಟೆ ಮತ್ತು ತೊಳೆದು ಹೊರಗಡೆ ಒಣಗಳು ಹಾಕಿದ್ದ ಬಟ್ಟೆ ಮಾತ್ರ ಉಳಿದಿದ್ದು ಮಕ್ಕಳ ಪುಸ್ತಕಗಳು ಕೂಡಾ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಆಲಂಕಾರು ಗ್ರಾಮಕರಣಿಕರು, ಆಲಂಕಾರು ಗ್ರಾಮ ಪಂಚಾಯತ್ ಅಧ್ಯಕ್ಷರು, ಕಾರ್ಯದರ್ಶಿಗಳು, ಅಭಿವೃದ್ದಿ ಅಧಿಕಾರಿ ಹಾಗೂ ಪಂಚಾಯತ್ ಸದಸ್ಯರು ತೆರಳಿ ಪರಿಶೀಲನೆ ನಡೆಸಿದ್ದಾರೆ.