
ಫೆ.8, 9 ರಂದು 15ನೇ ವರ್ಷದ ಜಪ್ಪಿನಮೊಗರು ಜಯ-ವಿಜಯ ಜೋಡುಕರೆ ಕಂಬಳ
ಮಂಗಳೂರು: ಮಂಗಳೂರು ಹೊರವಲಯದ ಜಪ್ಪಿನಮೊಗರು ಜಯ-ವಿಜಯ ಜೋಡುಕರೆ ಕಂಬಳ ಸಮಿತಿ ವತಿಯಿಂದ ಕೀರ್ತಿಶೇಷ ಜೆ.ಜಯಗಂಗಾಧರ ಶೆಟ್ಟಿ ಮನ್ಕುತೋಟಗುತ್ತು ಹಾಗೂ ನಾಡಾಜೆಗುತ್ತು ಇವರ ಸ್ಮರಣಾರ್ಥ 15ನೇ ವರ್ಷದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳ ಫೆಬ್ರವರಿ 8 ಮತ್ತು 9 ರಂದು ಇಲ್ಲಿನ ನೇತ್ರಾವತಿ ನದಿ ತೀರದಲ್ಲಿ ನಡೆಯಲಿದೆ.
ಈ ಕಂಬಳದ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದ ಕಂಬಳ ಸಮಿತಿ ಗೌರವಾಧ್ಯಕ್ಷರಾಗಿರುವ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ವಿವರ ನೀಡಿದರು.
ಕರಾವಳಿ ಕರ್ನಾಟಕ ಭಾಗದ ಸಾಂಪ್ರದಾಯಿಕ ಜನಪದ ಕ್ರೀಡೆಯಾಗಿರುವ ಕಂಬಳವನ್ನು ಉಳಿಸಬೇಕು ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂಬ ಸದುದ್ದೇಶದಿಂದ ಜಯ-ವಿಜಯ ಜೋಡುಕರೆ ಕಂಬಳ ಆರಂಭಿಸಲಾಗಿದೆ ಎಂದರು.
ಫೆಬ್ರವರಿ 8 ರಂದು ಬೆಳಗ್ಗೆ 8.30ಕ್ಕೆ ಮಂಗಳೂರಿನ ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಎಸ್. ಗಣೇಶ್ ರಾವ್ ಇವರ ಅಧ್ಯಕ್ಷತೆಯಲ್ಲಿ ವೇದಮೂರ್ತಿ ವಿಠಲದಾಸ ತಂತ್ರಿ ಕಂಬಳ ಉದ್ಘಾಟಿಸಲಿದ್ದಾರೆ. ಉದ್ಯಮಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಸಂಜೆ 7.00 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮನೋಜ್ ಕುಮಾರ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ನಾಡಾಜೆಗುತ್ತು ಉಮಾವತಿ ಶೆಟ್ಟಿ, ಜನಪ್ರತಿನಿಧಿಗಳು, ಉದ್ಯಮಿಗಳು, ಸಿನಿಮಾ ತಾರೆಯರು ಮತ್ತಿತರರು ಭಾಗವಹಿಸಲಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು. ಕಳೆದ ಬಾರಿಯ ಕಂಬಳದಲ್ಲಿ ಸುಮಾರು 150 ಜೊತೆ ಕೋಣಗಳು ವಿವಿಧ ವಿಭಾಗಗಳಲ್ಲಿ ಭಾಗಹಿಸಲಿವೆ. ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ. ಕನಹಲಗೆ, ಹಗ್ಗ ವಿಭಾಗ, ನೇಗಿಲು ವಿಭಾಗ ಹಾಗೂ ಅಡ್ಡ ಹಲಗೆ ವಿಭಾಗಗಳಲ್ಲಿ ಸ್ಪರ್ಧೆಯು ನಡೆಯಲಿದ್ದು ವಿಜೇತ ಕೋಣಗಳಿಗೆ ಈ ಬಾರಿಯೂ ಚಿನ್ನದ ಪದಕದೊಂದಿಗೆ ಶಾಶ್ವತ ಫಲಕವನ್ನು ನೀಡಿ ಗೌರವಿಸಲಾಗುತ್ತದೆ ಎಂದರು.
ಕಂಬಳ ಸಮಿತಿ ಅಧ್ಯಕ್ಷ ಅನಿಲ್ ಜೆ. ಶೆಟ್ಟಿ ಮನ್ಯುತೋಟಗುತ್ತು, ಕಾರ್ಯಾಧ್ಯಕ್ಷರಾದ ವೀಣಾಮಂಗಳ, ಪ್ರವೀಣ್‌ಚಂದ್ರ ಆಳ್ವ, ಸಂದೀಪ್ ಶೆಟ್ಟಿ ಎಕ್ಕೂರು, ಸಂತೋಷ್ ಆಳ್ವ,ನಿಶಾನ್ ಪೂಜಾರಿ, ಕಾರ್ಯದರ್ಶಿ ಉಮೇಶ್ ಅತಿಕಾರಿ, ಕೋಶಾಧಿಕಾರಿ ಬಾಲಕೃಷ್ಣ ಶೆಟ್ಟಿ, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ರಾಕೇಶ್ ರೈ, ಕರೆ ನಿರ್ಮಾಣ ಸಮಿತಿ ಪ್ರಧಾನ ಸಂಚಾಲಕ ಗಣೇಶ್ ಶೆಟ್ಟಿ, ಕಂಬಳ ಸಮಿತಿ ಗೌರವ ಸಲಹೆಗಾರ ಭುಜಂಗ ಶೆಟ್ಟಿ, ಉಪಾಧ್ಯಕ್ಷ ಗಣೇಶ್ ಶೆಟ್ಟಿ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ನಾಗೇಂದ್ರ ಕುಮಾರ್, ಉದ್ಯಮಿ ಸಾಯುದ್ದೀನ್ ಮತ್ತಿತರರಿದ್ದರು.