ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಸಚಿವ ಪ್ರಿಯಾಂಕ ಖರ್ಗೆ ರಾಜಿನಾಮೆಗೆ ಶಾಸಕ ಕಾಮತ್ ಆಗ್ರಹ

ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಸಚಿವ ಪ್ರಿಯಾಂಕ ಖರ್ಗೆ ರಾಜಿನಾಮೆಗೆ ಶಾಸಕ ಕಾಮತ್ ಆಗ್ರಹ


ಮಂಗಳೂರು: ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಪ್ರಿಯಾಂಕ ಖರ್ಗೆ ರಾಜಿನಾಮೆ ನೀಡಬೇಕು, ಅಲ್ಲದೆ ಪ್ರಕರಣದ ಸಿಬಿಐ ತನಿಖೆ ನಡೆಸಬೇಕು. ತಪ್ಪಿದಲ್ಲಿ ಬಿಜೆಪಿ  ಕಾನೂನು ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.

ಇಲ್ಲಿನ ಅಟಲ್‌ಸೇವಾ ಕೇಂದ್ರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ ಖರ್ಗೆ ಆಪ್ತರ ಕಿರುಕುಳಕ್ಕೆ ಹೆದರಿ ಬೀದರ್ ಗುತ್ತಿಗೆದಾರ ಸಚಿನ್ ಪಂಚಾಳ್ ಅವರು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ಸಚಿವ ಪ್ರಿಯಾಂಕ್ ಖರ್ಗೆ ನೈತಿಕ ಹೊಣೆ ಹೊತ್ತು  ರಾಜಿನಾಮೆ ನೀಡಬೇಕು, ಈ ಪ್ರಕರಣವನ್ನು ಗಂಭೀರ ಪರಿಗಣಿಸಿ ಅವರನ್ನು ಬಂಧಿಸಬೇಕು ಮತ್ತು ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ನವರು ಪಂಚ ಗ್ಯಾರಂಟಿ ಯೋಜನೆಯ ಜೊತೆಗೆ ಆತ್ಮಹತ್ಯೆ ಭಾಗ್ಯ ನೀಡಿ ಕುಂಟುಂಬದವರನ್ನು ಕಣ್ಣೀರಿನಿಂದ ಕೈ ತೊಳೆಯುವಂತೆ ಮಾಡಿದ್ದಾರೆ. ಆ ಕಣ್ಣೀರಿನ ಶಾಪ ತಟ್ಟದೇ ಬಿಡದು ಎಂದು ಹೇಳಿದರು.

ವಾಲ್ಮೀಕಿ ಹಗರಣದಲ್ಲಿ ಸಚಿವ ನಾಗೇಂದ್ರ ಸಿಲುಕಿದಾಗ ಅವರ ರಾಜಿನಾಮೆ ಪಡೆಯಲಾಗಿತ್ತು. ಈಗ ಪ್ರಿಯಾಂಕ ಖರ್ಗೆ ಅವರ ರಾಜಿನಾಮೆ ಪಡೆಯಲು ಮುಖ್ಯಮಂತ್ರಿಗಳು  ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ರಾಜಿನಾಮೆ ಪಡೆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಟ್ಟುಗೊಂಡು ತನ್ನ ಖುರ್ಚಿಗೆ ಕಂಟಕ ತರಬಹುದು ಎಂಬ  ಭೀತಿ ಕಾಡುತ್ತಿದೆಯೇ ಎಂದು ವೇದವ್ಯಾಸ್ ಕಾಮತ್ ಪ್ರಶ್ನಿಸಿದರು.

ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಈಶ್ವರಪ್ಪ ಪ್ರಕರಣ ಸೇರಿದಂತೆ ಸಣ್ಣಪುಟ್ಟ ವಿಷಯಕ್ಕೂ ಸಿದ್ದರಾಮಯ್ಯ, ಪ್ರಿಯಾಂಕ ಖರ್ಗೆ ಸಹಿತ ಕಾಂಗ್ರೆಸ್ ನಾಯಕರು ರಾಜಿ ನಾಮೆಗೆ ಬೀದಿ ಬೀದಿಗಳಲ್ಲಿ ಆಗ್ರಹಿಸುತ್ತಿದ್ದರು. ಈಗ ಅವರ ಸರ್ಕಾರವೇ ಆರೋಪಿ ಸ್ಥಾನದಲ್ಲಿರುವಾಗ ಎಲ್ಲರೂ ಮೌನ ವಹಿಸಿದ್ದಾರೆ ಎಂದು ಶಾಸಕ ವೇದವ್ಯಾಸ್  ಕಾಮತ್ ಟೀಕಿಸಿದರು.

ಮಂತ್ರಿಗಿರಿಗಾಗಿ ಸರ್ಕಾರವನ್ನು ಸಮರ್ಥಿಸುವ ಖಾದರ್:

ಮುಂದೆ ಸಂಪುಟ ವಿಸ್ತರಣೆ ವೇಳೆ ಸ್ಪೀಕರ್ ಯು.ಟಿ.ಖಾದರ್ ಅವರು ಮಂತ್ರಿಯಾಗಲಿದ್ದಾರೆ. ಹಾಗಾಗಿ ಅವರು ಸರ್ಕಾರವನ್ನು ಸಮರ್ಥಿಸುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.

ಸ್ಪೀಕರ್ ಕ್ಷೇತ್ರಕ್ಕೆ ಅನುದಾನ ಸಿಗುತ್ತದೆ ಎನ್ನುತ್ತಿದ್ದಾರೆ, ಹಾಗಾದರೆ ನಿಮ್ಮ ಕ್ಷೇತ್ರಕ್ಕೆ ಅನುದಾನ ಯಾಕೆ ಸಿಗುತ್ತಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ವೇದವ್ಯಾಸ್ ಕಾಮತ್, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಇಲ್ಲಿವರೆಗೆ ನಮಗೆ ಯಾವುದೇ ಅನುದಾನ ಬಂದಿಲ್ಲ. ಅನುದಾನ ಬಿಡುಗಡೆಯಾಗಬೇಕಾದರೆ ಹಣ ನೀಡಬೇಕು.  ಕಳೆದ 20 ತಿಂಗಳಲ್ಲಿ ಶಿಲಾನ್ಯಾಸಕ್ಕೆ ಯು.ಟಿ.ಖಾದರ್ ಅವರು ಒಂದೇ ಒಂದು ತೆಂಗಿನಕಾಯಿ ಒಡೆದದ್ದು ನಾನು ಕೇಳಿಲ್ಲ. ನಾನು ಕೂಡ ಒಂದೇ ಒಂದು ತೆಂಗಿನಕಾಯಿ  ಶಿಲಾನ್ಯಾಸಕ್ಕೆ ಒಡೆದಿಲ್ಲ. ಯು.ಟಿ.ಖಾದರ್ ಮತ್ತು ಪುತ್ತೂರು ಶಾಸಕರು ತೆಂಗಿನಕಾಯಿ ಒಡೆಯುವುದಿದ್ದರೆ, ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಅಭಿವೃದ್ಧಿ ಯೋಜ ನೆಗಳಿಗೆ ತಡವಾಗಿ ಬಿಡುಗಡೆಯಾದ ಅನುದಾನಗಳಿಗೆ ಮಾತ್ರ ಹೊರತು ಈ ಸರ್ಕಾರದ ಅನುದಾನಗಳಿಗೆ ಅಲ್ಲ ಎಂದು ವೇದವ್ಯಾಸ್ ಕಾಮತ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಮೇಶ್ ಕಂಡೆಟ್ಟು, ಭಾನುಮತಿ, ವಿಜಯ ಕುಮಾರ್ ರೈ, ಪೂರ್ಣಿಮಾ, ನಿತಿನ್ ಕುಮಾರ್ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article