
ಹತ್ಯೆ, ಆತ್ಮಹತ್ಯೆ ರಾಜ್ಯ ಸರಕಾರದ ಹೆಗ್ಗುರುತು: ಸಚಿವ ಪ್ರಹ್ಲಾದ ಜೋಶಿ
ಮಂಗಳೂರು: ಹತ್ಯೆ, ಆತ್ಮಹತ್ಯೆ ರಾಜ್ಯ ಕಾಂಗ್ರೆಸ್ ಸರಕಾರದ ಹೆಗ್ಗುರುತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಪ್ರೀತಿಯ ಅಂಗಡಿಯ ಬಗ್ಗೆ ಮಾತನಾಡುತ್ತಾರೆ. ಆದರೆ ಅವರದ್ದೇ ಪಕ್ಷ ಆಡಳಿತದಲ್ಲಿರುವ ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರು ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇಲ್ಲಿ ಪ್ರೀತಿ ಮಾರಾಟವಾಗುತ್ತಿಲ್ಲ, ಹತ್ಯೆಗಳು ಮಾರಾಟವಾಗುತ್ತಿದೆ ಎಂದು ಕೇಂದ್ರ ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಖಾತೆಯ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದ್ದಾರೆ.
ನಗರದಲ್ಲಿಎರುವ ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತ ಭ್ರಷ್ಟಾಚಾರ ಮಿತಿ ಮೀರಿದೆ. ವಿಧಾನಸಭಾ ಚುನಾವಣೆ ವೇಳೆ ಪಂಚ ಗ್ಯಾರಂಟಿ ಯೋಜನೆಗಳ ಹಣವನ್ನು ಕಟಾಕಟಾ ಎಂದು ಫಲಾನುಭವಿಗಳ ಖಾತೆಗೆ ಹಾಕುತ್ತೇವೆ ಎಂದು ರಾಹುಲ್ ಗಾಂಧಿಯವರು ಹೇಳಿದ್ದರು. ಇಲ್ಲಿನ ನಾಯಕರು ಈಗ ಜನರ ಹಣವನ್ನು ನುಂಗುತ್ತಿದ್ದಾರೆ. ಎಸ್‌ಪಿ-ಟಿಎಸ್‌ಪಿ ಯೋಜನೆಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿಗೆ ಬಳಸುತ್ತಿದ್ದಾರೆ. ವಾಲ್ಮೀಕಿ ನಿಗಮದ ಹಣವನ್ನು ಕೂಡಾ ಕಟಾಕಟಾ ತಿಂದಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಹಿತ ಆನೇಕ ಸಚಿವರು, ಮುಖಂಡರು ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ದುರಾಡಳಿತದ ಆರೋಪವನ್ನು ಎದುರಿಸುತ್ತಿದ್ದಾರೆ ಎಂದರು.
ಮುಡಾ ಹಗರಣದಲ್ಲಿ ಆರೋಪಿಯು ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿಯ ಪತ್ನಿ ಆಗಿರದಿದ್ದರೆ ಇಷ್ಟು ತ್ವರಿತವಾಗಿ ಕಡತ ವಿಲೇವಾರಿ ಆಗುತ್ತಿತ್ತೇ ಎಂದು ಹೈಕೋರ್ಟ್ ಪ್ರಶ್ನಿಸಿದೆ. ಈ ಬಗ್ಗೆ ಮುಖ್ಯಮಂತ್ರಿಗೆ ಗೊತ್ತಿರಲಿಲ್ಲ ಎಂದರೆ ಒಪ್ಪಲಾಗದು ಎಂದು ಹೈಕೋರ್ಟ್ ಹೇಳಿದೆ. ಹೈಕೋರ್ಟ್ ಆದೇಶದ ಹೊರತಾಗಿಯೂ ಮುಖ್ಯಮಂತ್ರಿಯವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡದೆ ಭಂಡತನದಿಂದ ಮುಂದುವರೆದಿದ್ದಾರೆ. ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ವಿರುದ್ಧ ಆರೋಪ ಇದ್ದರೂ ಅವರ ರಾಜೀನಾಮೆ ಪಡೆಯುವ ನಂಬಿಕೆ ನಮಗಿಲ್ಲ. ನಮ್ಮ ಕಾನೂನು ಮತ್ತು ರಾಜಕೀಯ ಹೋರಾಟ ಮುಂದುವರೆಯುತ್ತದೆ ಎಂದರು.
ಕಲಬುರ್ಗಿಯ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಅಂಗಿ ಹರಿದು ಪ್ರತಿಭಟಿಸಿದರೂ ನಾನು ರಾಜೀನಾಮೆ ನೀಡುವುದಿಲ್ಲ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಅವರ ತಂದೆ ಮಲ್ಲಿಕಾರ್ಜುನ ಖರ್ಗೆಯವರು ಎಂದೂ ರಾಜಕಾರಣದಲ್ಲಿ ಇಂತಹ ದುರಹಂಕಾರದ ಹೇಳಿಕೆ ನೀಡಿರಲಿಲ್ಲ. ಪ್ರಿಯಾಂಕ ಖರ್ಗೆಗೆ ದುರಹಂಕಾರ ತಲೆಗೇರಿದೆ ಜನತೆ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಹರೀಶ್ ಪೂಂಜ, ವೇದವ್ಯಾಸ ಕಾಮತ್, ರವಿಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಉಪಸ್ಥಿತರಿದ್ದರು,.