ಸಂಸ್ಕರಿಸದ ನೀರು: ಪಾಲಿಕೆ ಸಭೆಯಲ್ಲಿ ಆಡಳಿತ ವಿಪಕ್ಷ ವಾಗ್ವಾದ

ಸಂಸ್ಕರಿಸದ ನೀರು: ಪಾಲಿಕೆ ಸಭೆಯಲ್ಲಿ ಆಡಳಿತ ವಿಪಕ್ಷ ವಾಗ್ವಾದ


ಮಂಗಳೂರು: ತುಂಬೆ ಅಣೆಕಟ್ಟಿನಿಂದ ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳಿಗೆ ಪೂರೈಕೆಯಾ ಗುವ ಕುಡಿಯುವ ನೀರಿನಲ್ಲಿ ಸುಮಾರು ಶೇ. 50ರಷ್ಟು ಪ್ರಮಾಣದ ನೀರು ಸಂಸ್ಕರಣೆಯಾಗದೆ ಜನರಿಗೆ ಪೂರೈಕೆಯಾಗುತ್ತಿದೆ. ಎಸ್‌ಟಿಪಿಗಳಿಗೆ ಹರಿಯಬೇಕಾದ ಒಳಚರಂಡಿಯ ಕೊಳಚೆ ನೀರು ಅವ್ಯವಸ್ಥೆಯಿಂದಾಗಿ ನದಿ, ಕೆರೆಗಳಿಗೆ ಸೇರುತ್ತಿದೆ ಎಂದು ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾದ ಘಟನೆ ಇಂದು ನಡೆದ ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ನಡೆಯಿತು.

ಮೇಯರ್ ಮನೋಜ್ ಕೋಡಿಕಲ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾರವರು ಈ ಆರೋಪಗಳ ಬಗ್ಗೆ ಆಡಳಿತ ಹಾಗೂ ವಿಪಕ್ಷದ ಸದಸ್ಯರನ್ನು ಒಳ ಗೊಂಡು ಸತ್ಯಶೋಧನಾ ಸಮಿತಿ ಸಂಸ್ಕರಣೆಯಾಗದ ನೀರು ಪೂರೈಕೆಯಾಗುತ್ತಿದ್ದಲ್ಲಿ ತನಿಖೆಗೆ ಆದೇಶವಾಗಬೇಕು ಎಂದು ಸಲಹೆ ನೀಡಿದರು. ಈ ಬಗ್ಗೆ ಸುದೀರ್ಘ ಚರ್ಚೆ, ಆರೋಪ, ಪ್ರತ್ಯಾರೋಪ ಗದ್ದಲದ ನಡುವೆ ವಿಪಕ್ಷ ಸದಸ್ಯರು ಮೇಯರ್ ಪೀಠದೆದುರು ತೆರಳಿ ಆಕ್ಷೇಪ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಬಳಿಕ ಪ್ರತಿಕ್ರಿಯಿಸಿದ ಮೇಯರ್ ಮನೋಜ್ ಕುಮಾರ್, ಆಡಳಿತ ವಿಪಕ್ಷ ಸದಸ್ಯರ ಎಸ್‌ಟಿಪಿಗಳ ಪರಿಶೀಲನೆ ನಡೆಸಿ ಕೊಳಚೆ ನೀರು ನದಿಗಳಿಗೆ ಸೇರುತ್ತಿರುವುದು ಕಂಡು ಬಂದರೆ ತನಿಖೆಗೆ ಆದೇಶಿಸುವುದಾಗಿ ಭರವಸೆ ನೀಡಿದರು. 

ವಿಪಕ್ಷ ನಾಯಕ ಅನಿಲ್ ಕುಮಾರ್ ಎಸ್ಟಿಪಿಗಳ ಅವ್ಯವಸ್ಥೆ ಬಗ್ಗೆ ವಿಷಯ ಪ್ರಸ್ತಾಪಿಸಿದರು. ಪಚ್ಚನಾಡಿ, ಕಾವೂರು, ಬಜಾಲ್ ಹಾಗೂ ಸುರತ್ಕಲ್ ಎಸ್ಟಿಪಿಗಳ ನಿರ್ವಹಣೆ ಸಮರ್ಪಕವಾಗಿಲ್ಲ. ನಿರ್ವಹಣೆಗಾಗಿ 1.50 ಕೋಟಿ ರೂ.ಗಳನ್ನು ಒದಗಿಸಲಾಗುತ್ತಿದೆ. ಆದರೆ, ಪ್ಚನಾಡಿಯಲ್ಲಿ ಕೊಳಚೆ ನೀರು ಮಂಜಲಪಾದೆಯ ಮೂಲಕ ಮರವೂರು ಅಣೆಕಟ್ಟಿಗೆ ಸೇರುತ್ತಿದೆ ಎಂರು.

ಆಡಳಿತ ಪಕ್ಷದ ಸದಸ್ಯೆ ಸಂಗೀತ ಆರ್. ನಾಯಕ್ ಮಾತನಾಡಿ, ಕಳೆದ ನಾಲ್ಕು ವರ್ಷಗಳ ಹಿಂದೆ ಪಚ್ಚನಾಡಿ ಎಸ್ಟಿಪಿಯಲ್ಲಿ ಹಲವು ಸಮಸ್ಯೆ ಇತ್ತು. ಸುಮಾರು 3.5 ಕೋಟಿ ರೂ. ಅನುದಾನದಲ್ಲಿ ವ್ಯವಸ್ಥೆ ಸರಿಪಡಿಸಲಾಗಿದೆ. ಆದರೂ ಸಮಸ್ಯೆ ಇದೆ. ಹಿಂದೆ ಸರಿಯಾಗಿ ಟೆಂಡರ್ ಮಾಡದ ಗುತ್ತಿಗೆದಾರರ ಬಗ್ಗೆ ನಾಲ್ಕು ವರ್ಷಗಳ ಹಿಂದೆ ಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದರೂ ಮತ್ತೆ ಅದೇ ಗುತ್ತಿಗೆದಾರರಿಗೆ ಟೆಂಡರ್ ವಹಿಸಲಾಗಿದೆ. ಅವರ ಟೆಂಡರ್ ರದ್ದು ಮಾಡಬೇಕು ಎಂದು ಒತ್ತಾಯಿಸಿದರು. 

ರಾಜ್ಯದ 13 ನದಿಗಳು ಕಲುಷಿತವಾಗಿರುವ ಬಗ್ಗೆ ಬಂದಿರುವ ವರದಿಯಲ್ಲಿ ನೇತ್ರಾವತಿ ನದಿಯೂ ಸೇರಿದೆ. ಕೊಳಚೆ ನೀರು ನದಿಗೆ ಹೋಗುತ್ತಿದೆ. ನಗರದಲ್ಲಿ ಶೇ 40ರಿಂದ ಶೇ. 50ರಷ್ಟು ಜನರಿಗೆ ಸಂಸ್ಕರಣೆಗೊಳ್ಳದ ನೀರು ಪೂರೈಕೆಯಾಗುತ್ತಿದೆ. ಎಸ್ಟಿಪಿಗಳ ನಿರ್ವಹಣೆಯಾಗುತ್ತಿಲ್ಲ, ಗುತ್ತಿಗೆದಾರರು ಹಣ ಮಾಡುತ್ತಿದ್ದಾರೆ ಎಂದು ವಿಪಕ್ಷ ಸದಸ್ಯ ಪ್ರವೀಣ್ ಚಂದ್ರ ಆಳ್ವ ಆರೋಪಿಸಿದರು. 

ಆಡಳಿತ ಪಕ್ಷದ ಶ್ವೇತಾ ಪೂಜಾರಿ ಮಾತನಾಡಿ, ಸುರತ್ಕಲ್‌ನಲ್ಲಿ ನಾಲ್ಕು ವೆಟ್ವೆಲ್ಗಳನ್ನು ನಿರ್ಮಿಸಲಾಗಿದ್ದರೂ, ಕಂಡಿಗೆ ನದಿಗೆ ಕೊಳಚೆ ನೀರು ಹೋಗುತ್ತಿದೆ. ವೆಟ್ವೆಲ್ಗಳಿಗೆ ಕಳೆದ ಐದು ವರ್ಷಗಳಿಂದ ಸಂಪರ್ಕವೇ ನೀಡಲಾಗಿಲ್ಲ ಎಂದು ದೂರಿದರು. 

ನಾವು ನಗರದ ಶೇ. 50ರಷ್ಟು ಜನರಿಗೆ ನೀರು ಸಂಸ್ಕರಿಸದೆಯೇ ಪೂರೈಕೆ ಮಾಡುತ್ತಿಲ್ಲವೇ ಎಂಬುದನ್ನು ಮನಸಾಕ್ಷಿ ಯಾಗಿ ಮೇಯರ್ ಉತ್ತರಿಸಿ ಎಂದು ವಿಪಕ್ಷ ಸದಸ್ಯ ಪ್ರವೀಣ್ ಚಂದ್ರ ಆಳ್ವ ಸವಾಲೆಸೆದರು. 

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ೧೯೭೧ರಿಂದಲೂ ಅದೇ ವ್ಯವಸ್ಥೆಯಲ್ಲಿ ನೀರು ಪೂರೈಕೆಯಾಗುತ್ತಿದೆ. ಸಂಸ್ಕರಿಸದ ನೀರು ಪೂರೈಕೆಯಾಗುತ್ತಿದೆ ಎಂಬುದು ಸುಳ್ಳು ಆರೋಪ ಎಂದರು. 

ಈ ನಡುವೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆದು ವಿಪಕ್ಷ ಸದಸ್ಯರು ಮೇಯರ್ ಪೀಠದೆದುರು ತೆರಳಿ ಕಲುಷಿತ ನೀರು ಪೂರೈಕೆ ನಿಲ್ಲಿಸಿ ಎಂದು ಘೋಷಣೆ ಕೂಗಿದರು. ಕೆಲಹೊತ್ತು ಸಭೆಯಲ್ಲಿ ಗೊಂದಲ ವಾತಾವರಣ ಸೃಷ್ಟಿಯಾಯಿತು. 

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾರವರು ಕಲುಷಿತ ನೀರು ಕೆರೆ, ನದಿ, ಬಾವಿಗಳಿಗೆ ಹೋಗುತ್ತಿರುವ ದೂರಿನ ಬಗ್ಗೆ ತನಿಖೆ ಆಗಬೇಕು ಎಂದಾಗ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಎಲ್ಲಿಯೂ ಸಂಸ್ಕರಿಸದ ನೀರು ಕೊಡುತ್ತಿಲ್ಲ, ತನಿಖೆಯ ಅಗತ್ಯವಿಲ್ಲ, ಈ ಪ್ರಸ್ತಾಪ ಕಡತದಿಂದ ತೆಗೆಯಬೇಕು ಎಂದರು. ಕೊನೆಗೆ ಮೇಯರ್ ಪರಿಶೀಲನೆಯ ಭರವಸೆ ನೀಡಿದ ಈ ಪ್ರಸ್ತಾವ ಕೊನೆಗೊಂಡಿತು. 

ಉಪ ಮೇಯರ್ ಭಾನುಮತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವೀಣ ಮಂಗಳ, ಕದ್ರಿ ಮನೋಹರ ಶೆಟ್ಟಿ, ಸುಮಿತ್ರ, ಸರಿತಾ ಶ್ರೀಧರ್, ಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article