ಕೋಟೆಕಾರು ಬ್ಯಾಂಕಿನ ದರೋಡೆ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಕಮಿಷನರ್

ಕೋಟೆಕಾರು ಬ್ಯಾಂಕಿನ ದರೋಡೆ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಕಮಿಷನರ್


ಮಂಗಳೂರು: ಉಳ್ಳಾಲ ತಾಲ್ಲೂಕಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ.ಸಿ. ರೋಡ್ ಶಾಖೆಯಲ್ಲಿ ಜ.17 ರಂದು ನಡೆದ ದರೋಡೆ ಪ್ರಕರಣದಲ್ಲಿ ಪೊಲೀಸರು ಒಟ್ಟು 18.314 ಕೆಜಿ ಚಿನ್ನ ಹಾಗೂ 3.80 ಲಕ್ಷ ನಗದು ವಶಪಡಿಸಿ ಕೊಂಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಪ್ರಕರಣದಲ್ಲಿ ಒಟ್ಟು 18.674 ಕೆ.ಜಿ. ಚಿನ್ನಾಭರಣ ಹಾಗೂ 11.67 ಲಕ್ಷ ನಗದು ದರೋಡೆಯಾಗಿತ್ತು. ಪ್ರಕರಣಕ್ಕೆ ಸಂಬಂಧ ತಮಿಳುನಾಡಿನ ಪದ್ಮನೇರಿಯ ಅಮ್ಮನ್ ಕೋವಿಲ್‌ನ ಮುರುಗಂಡಿ ಥೇವರ್ (36), ಮುಂಬೈನ ಡೊಂಬಿವಿಲಿ ಪಶ್ಚಿಮದ ಗೋಪಿನಾಥ್ ಚೌಕ್‌ನ ಯೋಸುವ ರಾಜಂದ್ರನ್ (35), ಮುಂಬೈ ಚೆಂಬೂರು ತಿಲಕನಗರದ ಕಣ್ಣನ್ ಮಣಿ (36), ಮುರುಗಂಡಿಗೆ ಆಶ್ರಯ ನೀಡಿದ್ದ ಆತನ ತಂದೆ ಎಂ. ಷಣ್ಮುಗಸುಂದರಂ ಎಂಬುವವರನ್ನು ಬಂಧಿಸಿದ್ದೇವೆ ಎಂದರು.


ಮುರುಗಂಡಿ, ಯೋಸುವ ರಾಜೇಂದ್ರನ್ ಹಾಗೂ ಶಶಿ ಥೇವರ್ ಎಂಬುವರು ಮುಂಬೈನ ತಲೋಜಾ ಜೈಲಿನಲ್ಲಿ 2016ರಲ್ಲಿ ಒಟ್ಟಿಗೆ ಇದ್ದರು. ಕೆ.ಸಿ.ರೋಡ್‌ನ ಬ್ಯಾಂಕಿನಲ್ಲಿ ಭಾರಿ ಪ್ರಮಾಣದಲ್ಲಿ ಚಿನ್ನಾಭರಣ ಇರುವ ಬಗ್ಗೆ ಹಾಗೂ ಭದ್ರತಾ ವ್ಯವಸ್ಥೆಯಲ್ಲಿ ಲೋಪ ಇರುವ ಶಶಿ ಥೇವರ್ ಈ ತಂಡಕ್ಕೆ ಮಾಹಿತಿ ನೀಡಿದ್ದ. ಮುರುಗಂಡಿ, ಯೊಸುವಾ ರಾಜೇಂದ್ರನ್, ಮಣಿಕಣ್ಣನ್, ಶಶಿ ಥೆವರ್ ಹಾಗೂ ಉತ್ತರ ಭಾರತದ ಇತರ ಮೂವರನ್ನು ಒಳಗೊಂಡ ತಂಡವು ಕೆ.ಸಿ. ರೋಡ್ ಸಹಕಾರ ಬ್ಯಾಂಕ್ ದರೋಡೆಗೆ ಆರು ತಿಂಗಳು ಮೊದಲೇ ಸಂಚು ರೂಪಿಸಿತ್ತು. ಸ್ಥಳೀಯ ವ್ಯಕ್ತಿಗಳು ಈ ಕೃತ್ಯಕ್ಕೆ ನೆರವಾಗಿರುವ ಸಾಧ್ಯತೆ ಇದೆ. ಶಶಿ ಥೇವರ್ ಈಗಲೂ ತಲೆಮರೆಸಿಕೊಂಡಿದ್ದು, ಆತನ ಬಂಧನವಾದರೆ ಈ ಬಗ್ಗೆ ಖಚುತ ಮಾಹಿತಿ ಸಿಗಲಿದೆ.ಶಶಿ ತೇವರ್ ಸೇರಿ ಇನ್ನೂ ನಾಲ್ವರ ಬಂಧನ ಆಗಬೇಕಿದೆ ಎಂದು ತಿಳಿಸಿದರು.


ಮುರುಗಂಡಿ 2024ರ ಆಗಸ್ಟ್‌ನಲ್ಲಿ ಕೆ.ಸಿ.ರೋಡ್‌ಗೆ ಬಂದು ಬ್ಯಾಂಕ್ ಅನ್ನು ನೋಡಿ ಹೋಗಿದ್ದ. ನಂತರ ಅಕ್ಟೋಬರ್ ನಲ್ಲಿ ಅವರ ತಂಡದ ಕೆಲವರು ಮತ್ತೊಮ್ಮೆ ಕೆ.ಸಿ.ರೋಡ್‌ಗೆ ಬಂದಿದ್ದರು. ಆ ಬಳಿಕ ನ.27ರಂದು ಯೊಸುವಾ ರಾಜೆಂದ್ರನ್ ಮತ್ತು ಮುರುಗಂಡಿ ಮತ್ತೆ ಕೆ.ಸಿ. ರೋಡ್‌ಗೆ ಬಂದು ದರೋಡೆಗೆ ಸಂಚು ರೂಪಿಸಿದ್ದರು. ಶುಕ್ರವಾರ ಮಧ್ಯಾಹ್ನ ಸ್ಥಳದಲ್ಲಿ ಜನ ಓಡಾಟ ಕಡಿಮೆ ಇರುವುದರಿಂದ ಕೃತ್ಯಕ್ಕೆ ಆ ದಿನವನ್ನೇ ಆಯ್ಕೆ ಮಾಡಿದ್ದರು ಎಂದು ತಿಳಿಸಿದರು.

ಜ.೧೬ರಂದು ಮುಂಬೈನ ತಿಲಕನಗರದಿಂದ ಮುರುಗಂಡಿ ಮೂವರು ಸಹಚರರ ಜಿತೆ ಫಿಯೆಟ್ ಕಾರಿನಲ್ಲಿ ಹೊರಟಿದ್ದ. ಕಣ್ಣನ್ ಮಣಿ ಮತ್ತು ಇನ್ನಿಬ್ಬರು ರೈಲಿನಲ್ಲಿ ಬಂದಿದ್ದರು. ಮುರುಗಂಡಿ ಮತ್ತು ಯೊಸುವಾ ರಾಜೇಂದ್ರನ್ ಫಿಯೆಟ್ ಕಾರಿನಲ್ಲಿ ಕೇರಳ ಮೂಲಕ ತಮಿಳುನಾಡಿಗೆ ಪರಾರಿಯಾಗಿದ್ದರು. ಮೂವರು ಆರೋಪಿಗಳು ರಿಕ್ಷಾದಲ್ಲಿ ಹಾಗೂ ಒಬ್ಬ ಬಸ್ ಮೂಲಕ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಮುಂಬೈಗೆ ಪರಾರಿಯಾಗಿದ್ದರು ಎಂದರು.

ಸಿಸಿ.ಟಿ.ವಿ. ಕ್ಯಾಮೆರಾ ಪರಿಶೀಲಿಸಿದಾಗ ಕೃತ್ಯಕ್ಕೆ ಬಳಸಿದ ಕಾರು ಮುಂಬೈ ನೋಂದಣಿ ಹೊಂದಿರುವುದು ತಿಳಿಯಿತು. ಈ ಮಾಹಿತಿ ಆಧಾರದಲ್ಲಿ ಮುಂಬೈಗೆ ನಮ್ಮ ಪೊಲೀಸರ ತಂಡ ತೆರಳಿತ್ತು. ಅಷ್ಟರಲ್ಲಿ ಅರೋಪಿಗಳು ತಮಿಳುನಾಡಿಗೆ ಪರಾರಿಯಾಗಿದ್ದರು. ನಂತರ ಪೊಲೀಸರು ತಮಿಳುನಾಡಿಗೆ ತೆರಳಿ ಆರೋಪಿ ಗಳನ್ನು ಬಂಧಿಸಿದ್ದಾರೆ. ಚಿನ್ನವನ್ನು ತಮಿಳುನಾಡಿನಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಪಿ (ಕಾನೂನು ಸುವ್ಯವಸ್ಥೆ) ಸಿದ್ದಾರ್ಥ ಗೋಯಲ್, ಡಿಸಿಪಿ (ಅಪರಾಧ) ಕೆ. ರವಿಶಂಕರ್, ನಗರ ದಕ್ಷಿಣ ವಿಭಾಗದ ಎಸಿಪಿ ಧನ್ಯಾ ನಾಯಕ್ ಹಾಗೂ ಸಿಸಿಬಿ ಎಸಿಪಿ ಮನೋಜ್ ನಾಯ್ಕ್ ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article