
ದ.ಕ. ಶಿಕ್ಷಣ ಸಂಸ್ಥೆಗಳಿಗೆ ಹುಸಿ ಬಾಂಬ್ ಬೆದರಿಕೆ
ಮಂಗಳೂರು: ನಗರ ಮತ್ತು ಹೊರವಲಯದ ಮೂರು ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಸ್ಫೋಟಕ ವಸ್ತು ಇದೆ ಎಂಬ ಇಮೇಲ್ ಬೆದರಿಕೆ ಬಂದಿದೆ.
ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಅತ್ತಾವರದಲ್ಲಿರುವ ಮಣಿಪಾಲ ಶಾಲೆ, ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ನೀರುಮಾರ್ಗದಲ್ಲಿರುವ ಪ್ರೆಸಿಡೆನ್ಸಿ ಮತ್ತು ಕೇಂಬ್ರೀಡ್ಜ್ ಸ್ಕೂಲ್‌ನ ಆವರಣದಲ್ಲಿ ಸ್ಫೋಟಕ ವಸ್ತು ಇದೆ ಎಂಬುದಾಗಿ ಇಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿತ್ತು.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ಇಲಾಖೆಯ ವಿವಿಧ ತಂಡಗಳು ಮತ್ತು ಬಾಂಬ್ ನಿಷ್ಕ್ರಿಯ ದಳವು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿತು. ತಪಾಸಣೆಯ ಬಳಿಕ ಇದೊಂದು ಹುಸಿ ಬೆದರಿಕೆ ಸಂದೇಶವಾಗಿರುವುದು ಸ್ಪಷ್ಟವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
ಶಾಲಾ ಆವರಣಗಳಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಸುರಕ್ಷತೆಗಾಗಿ ಶಾಲೆಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಬೆದರಿಕೆಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.