
ಉಡುಪಿ-ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗ: ರೈತರು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ
ಮಂಗಳೂರು: ಪ್ರಸ್ತಾವಿತ ಉಡುಪಿ-ಕಾಸರಗೋಡು 400ಕೆವಿ ವಿದ್ಯುತ್ ಪ್ರಸರಣ ಮಾರ್ಗ ಯೋಜನೆಗೆ ಸಂಬಂಧಿಸಿದಂತೆ ಯೋಜನೆಯ ಗುತ್ತಿಗೆದಾರ ಕಂಪೆನಿ ‘ಯುಕೆಟಿಎಲ್-ಸ್ಟೆರ್‌ಲೈಟ್’ ಕಾಮಗಾರಿಯ ಕುರಿತು ತಪ್ಪು ಮಾಹಿತಿ ನೀಡಿ ಹೋರಾಟಗಾರರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ. ಕೃಷಿ ಭೂಮಿ ನಾಶ ಮಾಡಿ ವಿದ್ಯುತ್ ಲೈನ್ ಹಾದುಹೋಗಲು ಈ ಭಾಗದ ರೈತರು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ‘ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿಗಳ ಒಕ್ಕೂಟ’ದ ಪ್ರಧಾನ ಕಾರ್ಯದರ್ಶಿ ಇನ್ನಾ ಅವರು ಚಂದ್ರಶೇಖರ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆ ವಿರೋದಿಸಿ, ಜ.17ರಂದು ಮಂಗಳೂರಿಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಕ್ಕೊತ್ತಾಯ ಮನವಿ ಸಲ್ಲಿಸಲಾಗುವುದು. ಅಲ್ಲದೆ ಶೀಘ್ರದಲ್ಲಿಯೇ ದ.ಕ ಮತ್ತು ಉಡುಪಿ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಹಕ್ಕೊತ್ತಾಯ ಪ್ರತಿಭಟನೆ ನಡೆಸಲಾಗುವುದು ಎಂದರು.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಶೇ 95ಕ್ಕಿಂತ ಹೆಚ್ಚಿನ ಭೂ ಮಾಲೀಕರು ಯೋಜನಾ ಮಾರ್ಗವನ್ನು ವಿರೋಧಿಸುತ್ತಿದ್ದಾರೆ. ಸರ್ಕಾರಿ ಜಾಗದಲ್ಲಿ ಮತ್ತು ಕೆಲವು ಖಾಸಗಿ ಜಾಗದಲ್ಲಿ ಟವರ್ ಬೇಸ್ ನಿರ್ಮಾಣ ಕಾಮಗಾರಿ ನಡೆದಿದೆ. ಯೋಜನೆ ಮಂಜೂರು ಪಡೆದು ಆರು ವರ್ಷಗಳ ನಂತರವೂ ಮಂಗಳೂರು ಮತ್ತು ಕುಂದಾಪುರ ವಲಯ ಅರಣ್ಯ ಇಲಾಖೆಯಿಂದ 2ನೇ ಹಂತದ ಅನುಮತಿ ದೊರೆತಿಲ್ಲ ಎಂದವರು ಹೇಳಿದರು.
ರೈತರ ವಿರೋಧವಿದ್ದರೂ ಕಂಪೆನಿ ಪ್ರಕಟಣೆಗಳ ಮೂಲಕ ತಪ್ಪು ಮಾಹಿತಿ ನೀಡುತ್ತಿದೆ. ಫಲವತ್ತಾದ ಕೃಷಿ ಭೂಮಿ, ಧಾರ್ಮಿಕ ಕ್ಷೇತ್ರ, ನೂರಾರು ಮನೆಗಳನ್ನು ನಾಶ ಮಾಡಿ ಸಾಗುವ ಈ ವಿದ್ಯುತ್ ಪ್ರಸರಣ ಮಾರ್ಗ ಯೋಜನೆಗೆ ವಿರೋಧವಿದೆ. ರೈತರಿಗೆ ಸಮಸ್ಯೆಯಾಗದಂತೆ ಸಾಗುವುದಾದರೆ ನಮ್ಮ ವಿರೋಧವಿಲ್ಲ ಎಂದವರು ಹೇಳಿದರು.
ಸಂತ್ರಸ್ತ ರೈತರ ಹೋರಾಟದ ದಿಕ್ಕು ತಪ್ಪಿಸವ ಯತ್ನವನ್ನು ಕಂಪೆನಿ ನಡೆಸುತ್ತಿದೆ. ಕಂಪೆನಿ ಹೇಳಿಕೊಳ್ಳುತ್ತಿರುವಂತೆ ಕಾಮಗಾರಿಯ ಯಾವುದೇ ಪ್ರಗತಿ ನಡೆಯುತ್ತಿಲ್ಲ. ಕೃಷಿ ಭೂಮಿಯ ಮೇಲೆ ಟವರ್, ಲೈನ್ ಹಾದುಹೋಗುವುದಕ್ಕೆ ರೈತರ ವಿರೋಧವಿದೆ. ಕಂಪೆನಿ ಹೇಳಿಕೊಂಡಿರುವಂತೆ ಕಾಮಗಾರಿ ಚುರುಕುಗೊಂಡಿಲ್ಲ. ಕೇಂದ್ರ ಸರಕಾರದ ಇಂಧನ ಸಚಿವಾಲಯದ ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ(ಸಿಇಎಒ) ಡಿಸೆಂಬರ್ 2024ರ ಪ್ರಗತಿ ವರದಿಯಲ್ಲಿ ದಾಖಲಾಗಿರುವಂತೆ ಕರ್ನಾಟಕ ರಾಜ್ಯ ವ್ಯಾಪ್ತಿಯ 177 ಟವರ್‌ಗಳ ಪೈಕಿ 128 ಟವರ್ ವ್ಯಾಪ್ತಿ ಪ್ರದೇಶದಲ್ಲಿ ತೀವ್ರತರದ ವಿರೋಧವಿದೆ. ಉಳಿದೆಡೆ ಟವರ್ ಬೇಸ್ ನಿರ್ಮಾಣ ಕಾರ್ಯ ಮಾತ್ರ ನಡೆಯುತ್ತಿದೆ. ಈಗಾಗಲೇ ಅನೇಕ ಮಂದಿ ರೈತರು ಹೈಕೋರ್ಟ್, ಸುಪ್ರೀಂ ಕೋರ್ಟ್ ಮೆಟ್ಟಿಲು ಕೂಡ ಹತ್ತಿದ್ದಾರೆ. ರೈತರಲ್ಲಿ ಗೊಂದಲ ಮೂಡಿಸಿ ಹೋರಾಟದ ದಿಕ್ಕು ತಪ್ಪಿಸಲು ಕಂಪೆನಿ ತಪ್ಪು ಮಾಹಿತಿ ನೀಡುತ್ತಿದೆ ಎಂದು ಹೇಳಿದರು.
ಎಲ್ಲೂರಿನಿಂದ ಕಾಸರಗೋಡಿನವರೆಗೆ 115 ಕಿ.ಮೀ.ನಲ್ಲಿ 278 ಟವರ್ ನಿರ್ಮಾಣವಾಗಲಿದೆ. ಇದರಲ್ಲಿ 101 ಕೇರಳದಲ್ಲಿ, 177 ಕರ್ನಾಟಕದಲ್ಲಿರುತ್ತದೆ. 46 ಮೀಟರ್ ಕಾರಿಡಾರ್ ಇರುತ್ತದೆ. 1,150 ಎಕರೆ ಕಾರಿಡಾರ್‌ಗೆ ಸೇರಿದಂತೆ 3,450 ಎಕರೆ ನೇರವಾಗಿ ಯೋಜನೆಗೆ ಬಳಕೆಯಾಗಲಿದೆ. ಎಲ್ಲೂರಿನಿಂದ ಪುಣಚದವರೆಗೆ 1.65 ಅಡಿಕೆ ಮರ, 10,000 ಕ್ಕೂ ಅಧಿಕ ಅಡಿಕೆ ಮರ, ಇತರ ಸಾವಿರಾರು ಮರಗಳು ಬಲಿಯಾಗಲಿವೆ. ಅರಣ್ಯ ಇಲಾಖೆ ಪ್ರಕಾರ 4,500ಕ್ಕೂ ಅಧಿಕ ಬೃಹತ್ ಮರಗಳಿವೆ. ಅದಕ್ಕಾಗಿ ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ. ಹಾಗಾಗಿ ಕೃಷಿ ಭೂಮಿಯ ಬದಲು ಪರ್ಯಾಯ ಮಾರ್ಗದಲ್ಲಿ ಲೈನ್ ಹಾದು ಹೋಗುವಂತೆ ಮಾಡಬೇಕು. ಹಲವೆಡೆ ಗೆಜೆಟ್ ನೋಟಿಫಿಕೇಶನ್‌ನಲ್ಲಿ ಉಲ್ಲೇಖಿಸಲಾದ ಜಾಗವನ್ನು ಹೊರತುಪಡಿಸಿ ಬೇರೆ ಕಡೆ ಟವರ್ ನಿರ್ಮಿಸಲಾಗಿದೆ. ರೈತರನ್ನು ಕತ್ತಲಲ್ಲಿಟ್ಟು ಅವರ ಬದುಕು ನಾಶ ಮಾಡುವ ಯತ್ನ ನಡೆಯುತ್ತಿದೆ ಎಂದವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಸಂಚಾಲಕರಾದ ಅಲ್ಪೋನ್ಸ್ ಡಿ’ಸೋಜಾ, ಅಲೆಕ್ಸ್ ಸಿಕ್ವೇರಾ, ಸಂತ್ರಸ್ತೆ ಜೆಸಿಂತಾ ಲೋಬೋ ಉಪಸ್ಥಿತರಿದ್ದರು.