.jpeg)
ಜನಸಾಮಾನ್ಯರ ಬದುಕಿನ ಮೇಲೆ ಬೆಲೆಯೇರಿಕೆ ಬರೆ ಎಳೆಯುತ್ತಿರುವ ಕಾಂಗ್ರೆಸ್ ಸರ್ಕಾರ: ಸತೀಶ್ ಕುಂಪಲ
ಮಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಅಭಿವೃದ್ಧಿಗೆ ಬರ, ಜನಸಾಮಾನ್ಯರಿಗೆ ಬೆಲೆಯೇರಿಕೆಯ ಬರೆ. ಗ್ಯಾರಂಟಿ ಆಸೆ ತೋರಿಸಿ ಮತ ಪಡೆದು ಅಧಿಕಾರದ ಗದ್ದುಗೆ ಏರಿದ ಕಾಂಗ್ರೆಸ್ ಸರ್ಕಾರ ಪದೆಪದೆ ಬೆಲೆಯೇರಿಕೆ ಮಾಡುವುದರ ಮೂಲಕ ಜನರ ಜೇಬು ಲೂಟಿ ಮಾಡುವ ಕಾಯಕದಲ್ಲಿ ನಿರತವಾಗಿದೆ. ಇದೀಗ ಬಸ್ಸು ದರವನ್ನು ಏಕಾಏಕಿ ಶೇಕಡಾ 15 ರಷ್ಟು ಎರಿಕೆ ಮಾಡಿ ಜನಜೀವನದ ಮೇಲೆ ಮತ್ತೆ ಬರೆ ಎಳೆಯುವ ಕೆಲಸ ಮಾಡಿದೆ. ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಸರ್ಕಾರದ ಬೆಲೆಯೇರಿಕೆ ನೀತಿಯನ್ನು ವಿರೋಧಿಸುತ್ತದೆ ಮತ್ತು ಜನಹಿತವನ್ನು ಮನದಲ್ಲಿಟ್ಟು ತಕ್ಷಣ ಇಳಿಕೆ ಮಾಡಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆಗ್ರಹಿಸಿದ್ದಾರೆ.
ರಾಜ್ಯದ ವಿಧಾನ ಸಭೆಯ ಸ್ಪೀಕರ್ ಅವರು ಮಾಧ್ಯಮದ ಜತೆಯಲ್ಲಿ ಮಾತನಾಡುವಾಗ ಜನಹಿತದ ದೃಷ್ಟಿಯಿಂದ ಸರ್ಕಾರ ಬಸ್ಸುದರ ಏರಿಕೆ ಮಾಡಿದೆ ಎಂದು ಹೇಳಿಕೆ ನೀಡಿರುತ್ತಾರೆ. ಇದರಲ್ಲಿ ಜನಹಿತ ಎಲ್ಲಿದೆ ಎನ್ನುವುದನ್ನು ಅವರೇ ಬಯಲು ಪಡಿಸಬೇಕು. ಸರ್ಕಾರಕ್ಕೆ ಕಿವಿಹಿಂಡಿ ಬುದ್ದಿ ಹೇಳಬೇಕಿದ್ದ ಸ್ಪೀಕರ್ ಅವರೇ ವಕ್ತಾರನ ರೀತಿಯಲ್ಲಿ ಮಾತನಾಡುತ್ತಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಬಂದ ಬಳಿಕ ರಾಜ್ಯದಲ್ಲಿ ಹತ್ಯೆ, ರೈತರ, ಅಧಿಕಾರಿಗಳ, ಗುತ್ತಿಗೆದಾರರ, ಅಮಾಯಕರ ಆತ್ಮಹತ್ಯೆ, ಲವ್ ಜಿಹಾದಿ ಹತ್ಯೆ, ಪಾಕಿಸ್ತಾನ ಜಿಂದಾಬಾದ್ ಘೋಷಣೆ, ಹಿಂದು ಸಂಘಟನೆ, ಬಿಜೆಪಿ. ಕಾರ್ಯಕರ್ತರು, ಜನಪ್ರತಿನಿಧಿಗಳ ಮೇಲೆ ಕೇಸು, ದಬ್ಬಾಳಿಕೆ, ಭ್ರಷ್ಟಾಚಾರ, ಬೆಲೆಯೇರಿಕೆ ಇವುಗಳಿಂದಲೇ ಗಮನ ಸೆಳೆಯುತ್ತಿದೆಯೇ ವಿನಾಃ ಅಭಿವೃದ್ಧಿ, ಹೊಸ ಯೋಜನೆಗಳು, ಜನಪರ ಕಾರ್ಯಕ್ರಮ ಗಳು ಮರೀಚಿಕೆಯಾಗಿದೆ ಎಂದು ಕುಂಪಲ ಹೇಳಿದರು.
ಗ್ಯಾರಂಟಿ ಮೂಲಕ ಜನರಿಗೆ ಹತ್ತು ರೂ. ನೀಡಿ ಇನ್ನೊಂದು ಕಡೆಯಿಂದ ನೂರು ರೂ. ವಸೂಲಿ ಮಾಡುವ ಚಟವನ್ನಿಟ್ಟಿರುವ ಕಾಂಗ್ರೆಸ್ ಸರ್ಕಾರಕ್ಕೆ ಬುದ್ದಿ ಬರಬೇಕಾದರೆ ಜನಸಾಮಾನ್ಯರು ಬೀದಿಗಿಳಿದು ಆಂದೋಲನದ ಹಾದಿ ಹಿಡಿಯಬೇಕಿದೆ. ಭಾರತೀಯ ಜನತಾ ಪಾರ್ಟಿಯು ಸದಾ ಜನಪರವಾಗಿ ನಿಲ್ಲಲಿದೆ ಎಂದು ಕುಂಪಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.