ನಕಲಿ ಚಿನ್ನ ಅಡವಿಟ್ಟು ವಂಚನೆ, ನಿಯಮಾನುಸಾರ ಕ್ರಮ: ಬೋಜ ಮೂಲ್ಯ

ನಕಲಿ ಚಿನ್ನ ಅಡವಿಟ್ಟು ವಂಚನೆ, ನಿಯಮಾನುಸಾರ ಕ್ರಮ: ಬೋಜ ಮೂಲ್ಯ


ಮಂಗಳೂರು: ಬಂಟ್ವಾಳದ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ(ಬ್ಯಾಂಕ್)ದ ಪಡೀಲು ಶಾಖೆಯಲ್ಲಿ ನಕಲಿ ಚಿನ್ನವಿಟ್ಟು 2 ಕೋಟಿ ರೂ.ಗಳಿಗೂ ಅಧಿಕ ಸಾಲ ಪಡೆದ ವಂಚನೆ ಪ್ರಕರಣದಲ್ಲಿ ನಿಯಮಾನುಸಾರ ಬಾಕಿಯನ್ನು ಸಂಪೂರ್ಣವಾಗಿ ವಸೂಲಾತಿ ಮಾಡಲಾಗಿದೆ ಎಂದು ಸಂಘದ ಪ್ರಧಾನ ವ್ಯವಸ್ಥಾಪಕ ಬೋಜ ಮೂಲ್ಯ ತಿಳಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಸಹಕಾರಿ ಬ್ಯಾಂಕ್ ನ ಕಳೆದ ಐದು ವರ್ಷಗಳ ಪ್ರಗತಿಯ ವಿವರ ನೀಡುವ ಸಂದರ್ಭ ಸುದ್ದಿಗಾರರ ಪ್ರಶ್ನೆಗೆ ಈ ಸ್ಪಷ್ಟನೆ ನೀಡಿದರು. 

ಪಡೀಲ್ ಶಾಖೆಯಲ್ಲಿ ಪುತ್ತೂರಿನ ಅಬೂಬಕರ್ ಸಿದ್ದೀಕ್ ಎಂಬಾತ ಚಿನ್ನ ಲೇಪಿತ ಆಭರಣಗಳನ್ನು ಅಡವಿರಿಸಿ ೨.೧೧ ಕೋಟಿ ರೂ. ಸಾಲ ಪಡೆದಿದ್ದರು. ಹರಾಜು ಪ್ರಕ್ರಿಯೆ ಹಾಗೂ ಪ್ರಕರಣದ ಆರೋಪಿಗಳಲ್ಲಿ ಓರ್ವರಾದ ಸರಫರಿಂದ ವಸೂಲು ಮಾಡಿಕೊಂಡು ಬ್ಯಾಂಕ್ ಗೆ ಬರಬೇಕಾಗಿದ್ದ ಹಣವನ್ನು ಸಂಪೂರ್ಣವಾಗಿ ಜಮಾ ಮಾಡಲಾಗಿದೆ. ನಕಲಿ ಚಿನ್ನಾಭರಣ ಇರಿಸಿದ್ದ ಆರೋಪಿ ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ ಎಂದು ಅವರು ಹೇಳಿದರು. 

 ಬ್ಯಾಂಕ್ ನ ಬಾಕಿ ಹಣಕ್ಕಾಗಿ ಸಿಬ್ಬಂದಿಯ ವೇತನದ ಎರಿಯರ್ಸ್ ನ್ನೂ ಬಳಸಲಾಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆಡಳಿತ ಮಂಡಳಿಯ ಸಭೆಯ ನಿರ್ಣಯದಂತೆ ಬ್ಯಾಂಕ್ ಗಾಗಿ ಸಿಬ್ಬಂದಿ ತಮ್ಮ ಐದು ತಿಂಗಳ ಎರಿಯರ್ಸ್ ಹಣವನ್ನು ತ್ಯಾಗ ಮಾಡಿದ್ದಾರೆ ಎಂದರು. 

ಬ್ಯಾಂಕ್ ನ ಅಧ್ಯಕ್ಷರಾಗಲಿ, ಆಡಳಿತ ಮಂಡಳಿಯವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸದಿರುವ ಬಗ್ಗೆ ಸುದ್ದಿಗಾರರು ಬ್ಯಾಂಕ್ ಸಿಬ್ಬಂದಿಯನ್ನು ತರಾಟೆಗೈದಾಗ, ಮುಂದೆ ಅವರು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಲಿದ್ದಾರೆ. ಸಂಘದ ಪ್ರಗತಿಯ ಕುರಿತಂತೆ ತಾವು ಈ ದಿನ ಮಾಹಿತಿ ನೀಡುತ್ತಿರುವುದಾಗಿ ಅವರು ಹೇಳಿದರು. 

2023-24ನೇ ಸಾಲಿನಲ್ಲಿ ಬ್ಯಾಂಕ್ ಒಟ್ಟು 982.54 ಕೋಟಿ ರೂ. ವ್ಯವಹಾರ ನಡೆಸಿ 5.71 ಕೋಟಿ ರೂ. ಲಾಭ ಗಳಿಸಿತ್ತು. 16 ಶಾಖೆಗಳನ್ನು ಹೊಂದಿರುವ ಬ್ಯಾಂಕ್ ಅಡಿಟ್ ವರ್ಗೀಕರಣದಲ್ಲಿ ಎ ದರ್ಜೆಯನ್ನು ಹೊಂದಿದೆ. 2024ರ ನವೆಂಬರ್ ಅಂತ್ಯಕ್ಕೆ 8917 ಸದಸ್ಯರನು ಬ್ಯಾಂಕ್ ಹೊಂದಿದ್ದು, 719.07 ಕೋಟಿ ರೂ. ವ್ಯವಹಾರದೊಂದಿಗೆ 1.51 ಕೋಟಿ ರೂ. ಅಂದಾಜು ಲಾಭವನ್ನು ಹೊಂದಿದೆ ಎಂದು ಅವರು ಹೇಳಿದರು. 

ಎಜಿಎಂ ಮೋಹನ್, ಸಿಬ್ಬಂದಿ ನಳಿನಿ, ವಿನೋದ್ ಕುಮಾರ್, ಶರತ್ ಕುಮಾರ್, ಉದಯ್ ಕುಮಾರ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article