ಬಾಣಂತಿಯರ ಸರಣಿ ಸಾವು: ಸಚಿವರ ರಾಜೀನಾಮೆಗೆ ಮಹಿಳಾ ಮೋರ್ಚಾ ಆಗ್ರಹ

ಬಾಣಂತಿಯರ ಸರಣಿ ಸಾವು: ಸಚಿವರ ರಾಜೀನಾಮೆಗೆ ಮಹಿಳಾ ಮೋರ್ಚಾ ಆಗ್ರಹ

ಮಂಗಳೂರು: ರಾಜ್ಯದಲ್ಲಿ ಬಾಣಂತಿಯರು ಮತ್ತು ನವಜಾತ ಶಿಶುಗಳ ಸರಣಿ ಸಾವು ಸಂಭವಿಸುತ್ತಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮೋರ್ಚೆ ಅಧ್ಯಕ್ಷೆ ಮಂಜುಳಾ ರಾವ್ ಒತ್ತಾಯಿಸಿದ್ದಾರೆ.

ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಯಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಬಾಣಂತಿಯರು, ನವಜಾತ ಶಿಶುಗಳ ಸಾವಿನ ಹೊಣೆ ಹೊರಲು ಯಾರು ತಯಾರಾಗಿದ್ದಾರೆ ಎಂದು ಪ್ರಶ್ನಿಸಿದರು.

ಆರೋಗ್ಯ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರದಿಂದಾಗಿ ಆಸ್ಪತ್ರೆಗಳಿಗೆ ಕಳಪೆ ದರ್ಜೆಯ ಔಷಧಗಳು ಸರಬರಾಜು ಆಗುತ್ತಿವೆ. ಬಾಣಂತಿಯರಿಗೆ ಗುಣಮಟ್ಟದ ಔಷಧಗಳು ಸಿಗುತ್ತಿಲ್ಲ. ಜತೆಗೆ ಕೇಂದ್ರದ ಯೋಜನೆಗಳಾದ ಮಾತ್ರವಂದನಾ, ಪೋಷಣ್ ಅಭಿಯಾನ್ ಇತ್ಯಾದಿಗಳು ಕೂಡ ದೊರಕುತ್ತಿಲ್ಲ. ರಾಜ್ಯ ಸರ್ಕಾರ ಬಾಣಂತಿಯರ ಆರೋಗ್ಯ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಸಾವಿಗೀಡಾದ ಬಾಣಂತಿಯರ ಕುಟುಂಬಗಳಿಗೆ ತಲಾ ಇಪ್ಪತ್ತೈದು ಲಕ್ಷ ರೂ. ಪರಿಹಾರವನ್ನು ರಾಜ್ಯ ಸರ್ಕಾರ ನೀಡಬೇಕು. ತಾಯಿಯನ್ನು ಕಳೆದುಕೊಂಡು ಅನಾಥರಾದ ಮಕ್ಕಳ ದತ್ತು ತೆಗೆದುಕೊಂಡು, ಅವರ ಜೀವನಕ್ಕೆ ಬೇಕಾದ ಸರ್ವ ವ್ಯವಸ್ಥೆಗಳನ್ನು ಕಲ್ಪಿಸಬೇಕು ಇದಕ್ಕಾಗಿ ಸಮಿತಿಯನ್ನು ರಚನೆ ಮಾಡಬೇಕು ಎಂದು ಮಂಜುಳಾ ರಾವ್ ಆಗ್ರಹಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ 2023-24ನೇ ಸಾಲಿನಲ್ಲಿ 9 ಮಂದಿ ಬಾಣಂತಿಯರ ಸಾವು ಸಂಭವಿಸಿದೆ ಎಂದು ಆರೋಪಿಸಿದ ಅವರು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವ್ಯವಸ್ಥೆ ಹದಗಿಟ್ಟಿದೆ. ಸಿಬ್ಬಂದಿ ಕೊರತೆ, ಔಷಧ ಗುಣಮಟ್ಟ ಕೊರತೆ, ಆಂಬುಲೆನ್ಸ್ ನಿರ್ವಹಣೆ ಕೂಡ ಸರಿಯಾಗಿ ಆಗುತ್ತಿಲ್ಲ. ಕೂಡಲೇ ಎಲ್ಲ ಆಸ್ಪತ್ರೆಗಳನ್ನು ವ್ಯವಸ್ಥಿತಗೊಳಿಸಿ, ಮೇಲ್ದರ್ಜೆಗೆ ಏರಿಸಬೇಕು ಎಂದು ಒತ್ತಾಯಿಸಿದರು.

ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಶ್ವೇತಾ, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ, ಲಿಖಿತಾ ಶೆಟ್ಟಿ, ವಜ್ರಾಕ್ಷಿ, ಸಂಧ್ಯಾ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article