
ಯೂನಿಸೆಕ್ಸ್ ಸಲೂನ್, ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ, ಅನೈತಿಕ ದಂಧೆ: ಕ್ರಮಕ್ಕೆ ಶಾಸಕ ಕಾಮತ್ ಆಗ್ರಹ
Saturday, January 25, 2025
ಮಂಗಳೂರು: ಮಂಗಳೂರು ನಗರದಾದ್ಯಂತ ಯೂನಿಸೆಕ್ಸ್ ಸಲೂನ್, ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ, ಅನೈತಿಕ ದಂಧೆ ನಡೆಯುತ್ತಿರುವ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಶಾಸಕ ವೇದವ್ಯಾಸ್ ಕಾಮತ್ ಅವರು ಪ್ರಕಟಣೆಯಲ್ಲಿ ನಗರ ಪೊಲೀಸ್ ಆಯುಕ್ತರನ್ನು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಜಿಲ್ಲೆಯಲ್ಲಿ ಅನೈತಿಕ ಚಟುವಟಿಕೆಗಳು ಯಾವುದೇ ಭಯವಿಲ್ಲದೇ ನಡೆಯಲಾರಂಭಿಸಿವೆ. ಈ ಬಗ್ಗೆ ವಿಶ್ವ ಹಿಂದೂ ಪರಿಷತ್ ಮಂಗಳೂರು ರವರು ನನ್ನ ಸಹಿತ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೂ ಮನವಿ ಸಲ್ಲಿಸಿದ್ದು ಅವರ ಕಾಳಜಿಗೆ ನನ್ನ ಸಂಪೂರ್ಣ ಸಹಕಾರವಿದೆ. ನಿಯಮಬದ್ಧವಾಗಿ ನಡೆಯುವ ಯೂನಿಸೆಕ್ಸ್ ಸಲೂನ್‌ಗಳಿಗೆ ಯಾರದ್ದೂ ಅಭ್ಯಂತರವಿಲ್ಲ. ಆದರೆ ಯುನಿಸೆಕ್ಸ್ ಸಲೂನ್, ಮಸಾಜ್ ಪಾರ್ಲರ್ ಹೆಸರಿನಲ್ಲಿ ನಡೆಯುತ್ತಿರುವ ಡ್ರಗ್ಸ್ ಮಾಫಿಯಾ, ಸೆಕ್ಸ್ ಮಾಫಿಯಾ, ಅನೈತಿಕ ದಂಧೆಗಳಿಗೆ ಎಲ್ಲರ ವಿರೋಧವಿದ್ದು ಇಂತಹವುಗಳ ಪರವಾನಿಗೆಯನ್ನೇ ರದ್ದುಗೊಳಿಸಬೇಕು ಎಂದರು.
ಅಪ್ರಾಪ್ತ ವಯಸ್ಸಿನ ಮಕ್ಕಳು ಸಹ ಈ ದಂಧೆಯ ಬಲಿಪಶುಗಳಾಗುತ್ತಿರುವುದು ಗಂಭೀರ ಸ್ವರೂಪದ್ದಾಗಿದ್ದು, ಇನ್ನೂ ಸಹ ನಿರ್ಲಕ್ಷ್ಯ ವಹಿಸಿ ಮತ್ತೇನಾದರೂ ಅಹಿತಕರ ಘಟನೆಗಳು ನಡೆದರೆ ಅದರ ನೇರ ಹೊಣೆಯನ್ನು ಸರ್ಕಾರ ಹಾಗೂ ಪೊಲೀಸ್ ಇಲಾಖೆಯೇ ಹೊರಬೇಕಾಗುತ್ತದೆ ಎಂದು ಶಾಸಕರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.