
ಪ್ರತಿ ಶಿಕ್ಷಣ ಸಂಸ್ಥೆಗಳಲ್ಲಿ ‘ಮಕ್ಕಳ ಮಾದರಿ ಸಂಸತ್’ ನಡೆಯಬೇಕು: ಸಂಸದ ಚೌಟ
ಮಂಗಳೂರು: ಪ್ರಜಾಪ್ರಭುತ್ವದಲ್ಲಿ ಸಂಸದೀಯ ವ್ಯವಸ್ಥೆಯ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ಮೂಡಿಸಲು ಪ್ರತಿ ಶಿಕ್ಷಣ ಸಂಸ್ಥೆಗಳಲ್ಲಿ ‘ಮಕ್ಕಳ ಮಾದರಿ ಸಂಸತ್’ ನಡೆಯಬೇಕು ಎಂದು ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಆಶಿಸಿದರು.
ಸೆಂಟರ್ ಫಾರ್ ಇಂಟೆಗ್ರೇಟೆಡ್ ಲರ್ನಿಂಗ್ ಹಾಗೂ ನಗರದ ವಿವಿಧ ಶಿಕ್ಷಣ ಸಂಸ್ಥೆಗಳು ಶನಿವಾರ ಜೊತೆಯಾಗಿ ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಏ ರ್ಪಡಿಸಿದ ‘ಅಂತರ್‌ಶಾಲಾ ಮಕ್ಕಳ ಮಾದರಿ ಸಂಸತ್’ನಲ್ಲಿ ಅವರು ಮಾತನಾಡಿದರು.
ನಾನು ಬಾಲ್ಯದಲ್ಲಿದ್ದಾಗ ಎಲ್ಲ ಶಾಲೆಗಳಲ್ಲೂ ಮಾದರಿ ಪಾರ್ಲಿಮೆಂಟ್ ನಡೆಯುತ್ತಿತ್ತು. ಆದರೆ ಈಗ ಅದು ಬಹುತೇಕ ಕಣ್ಮರೆಯಾಗಿದೆ. ಇದಕ್ಕೆ ಕಾರಣ ಗೊತ್ತಿಲ್ಲ, ಆದರೂ ಎಲ್ಲ ಶಾಲೆಗಳಲ್ಲಿ ಇಂತಹ ಮಾದರಿ ಸಂಸತ್ ನಡೆಸಬೇಕಾದ್ದು ಅತ್ಯಗತ್ಯ ಎಂದರು.
ಪ್ರಜಾಪ್ರಭುತ್ವದಲ್ಲಿ ಜನರಿಗಾಗಿ ಸಂಸತ್ ಇರುತ್ತದೆ. ಹಾಗಾಗಿ ಜನರೇ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಕ್ರಮ ನಮ್ಮದು. 1947ರಲ್ಲಿ ಸ್ವಾತಂತ್ರ್ಯ ದೊರಕಿದಾಗ ಭಾರತದ ಬಗ್ಗೆ ವಿದೇಶಗಳಿಗೆ ನಂಬಿಕೆ ಇರಲಿಲ್ಲ. ನಮ್ಮನ್ನು ನಾವೇ ಹೇಗೆ ಆಳ್ವಿಕೆ ಮಾಡುತ್ತೇವೆ ಎಂಬ ಪ್ರಶ್ನೆ ಉದ್ಭವಿಸಿತ್ತು. ಈಗ ಭಾರತ ಜಗತ್ತಿನಲ್ಲೇ ಅತೀ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮತ್ತಿದ್ದು, ಪ್ರಬಲ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳುತ್ತಿದೆ. ಜಗತ್ತೇ ಭಾರತದ ಕಡೆಗೆ ನೋಡುವಂತಾಗಿದೆ ಎಂದರು.
ಶಾಸನ ಪ್ರಕ್ರಿಯೆಗೂ ಪ್ರಾಮುಖ್ಯತೆ ಇರಲಿ:
ವಿದ್ಯಾಭ್ಯಾಸದಲ್ಲಿ ಶಾಸನ ಪ್ರಕ್ರಿಯೆ ವಿಚಾರಗಳಿಗೂ ಆದ್ಯತೆ ಇರಬೇಕು. ಶಾಸಕಾಂಗ, ಕಾರ್ಯಾಂಗದ ಕಾರ್ಯನಿರ್ವಹಣೆ ಬಗ್ಗೆ ಇಂದಿನ ಪೀಳಿಗೆಗೆ ತಿಳಿದಿರಬೇಕು. ನಮ್ಮನ್ನು ನಾವೇ ಆಳ್ವಿಕೆ ಮಾಡುವುದು ಹೇಗೆ ಎಂಬ ಅರಿವು ಇರಬೇಕು. ಜನರ ಅಪೇಕ್ಷೆಯನ್ನು ಅರ್ಥಮಾಡಿಕೊಂಡರೆ ಮಾತ್ರ ಉತ್ತಮ ಜನಪ್ರತಿನಿಧಿಯಾಗಿ ಇರಲು ಸಾಧ್ಯವಿದೆ. ಪ್ರಸಕ್ತ ಜನಸಂಖ್ಯೆಯಲ್ಲಿ ಭಾರತ ಅತ್ಯಧಿಕ ಗರಿಷ್ಠ ಸಂಖ್ಯೆಯಲ್ಲಿ ಯುವ ಪೀಳಿಗೆಯನ್ನು ಹೊಂದಿದ್ದು, ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವ ಹೊಣೆ ನಮ್ಮ ಮೇಲಿದೆ ಎಂದರು.
ಸೆಂಟರ್ ಫಾರ್ ಇಂಟೆಗ್ರೇಟೆಡ್ ಲರ್ನಿಂಗ್ ಮುಖ್ಯಸ್ಥೆ ಸಚಿತಾ ನಂದಗೋಪಾಲ್ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿಗಳೇ ನಡೆಸಿದ ‘ಮಾದರಿ ಸಂಸತ್ ಕಲಾಪ’!
ಈ ಸಂದರ್ಭ ನಗರದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ‘ಮಾದರಿ ಸಂಸತ್’ ಅಧಿವೇಶನ ನಡೆಸಿಕೊಟ್ಟರು. ಸ್ಪೀಕರ್, ಪ್ರಧಾನಮಂತ್ರಿ, ಸಚಿವ ಸಂಪುಟ, ವಿಪಕ್ಷ ನಾಯಕ, ಸಂಸತ್ ಕಾರ್ಯದರ್ಶಿಗಳು ಸೇರಿದಂತೆ ಸಂಸತ್‌ನ ಎಲ್ಲ ಜವಾಬ್ದಾರಿ ನಿರ್ವಹಣೆಯನ್ನು ಮಕ್ಕಳೇ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಸುಮಾರು 90 ನಿಮಿಷಗಳ ಕಾಲ ನಡೆದ ಕಲಾಪದಲ್ಲಿ ಮಡಿದ ಗಣ್ಯರಿಗೆ ಸಂತಾಪ, ಸಂಪುಟದ ಸಚಿವರ ಪರಿಚಯ, ನೂತನ ಸದಸ್ಯರ ಪ್ರಮಾಣ ವಚನ, ಪ್ರಶ್ನೋತ್ತರ ಅವಧಿ, ಚರ್ಚೆ, ಖಾಸಗಿ ವಿಧೇಯಕಗಳ ಮಂಡನೆ ನಡೆಯಿತು. ಸುಮಾರು 50 ಮಂದಿ ವಿದ್ಯಾರ್ಥಿಗಳು ಮಾದರಿ ಸಂಸತ್‌ನಲ್ಲಿ ಭಾಗವಹಿಸಿದ್ದರು.
ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಮುಖರಾದ ಶೃತಿ ಜಿತೇಶ್, ಉಷಾ ಇದ್ದರು. ನಂದಗೋಪಾಲ್ ಹಾಗೂ ಮರಿಯಾ ನಿರೂಪಿಸಿದರು.