
ಎಸ್‌ಸಿಡಿಸಿಸಿ ಬ್ಯಾಂಕ್ ಕಾರ್ಯವೈಖರಿಗೆ ಮೆಚ್ಚುಗೆ
ಮಂಗಳೂರು: ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಇದರ ನೂತನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಗದೀಶ್ ಎಂ.ಕೆ. ಅವರು ಶುಕ್ರವಾರ ಎಸ್‌ಸಿಡಿಸಿಸಿ ಬ್ಯಾಂಕಿಗೆ ಭೇಟಿ ನೀಡಿ ಬ್ಯಾಂಕಿನ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕಿನ ನೂತನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ನೇಮಕಗೊಂಡ ನಂತರ ಮೊದಲ ಬಾರಿಗೆ ಎಸ್‌ಸಿಡಿಸಿಸಿ ಬ್ಯಾಂಕಿಗೆ ಭೇಟಿ ನೀಡಿದ ಅವರು, ಬ್ಯಾಂಕಿನ ಎಲ್ಲಾ ವಿಭಾಗಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು. ಜಿಲ್ಲೆಯ ರೈತ ಸಮುದಾಯದ ಒಡನಾಡಿಯಾಗಿ ರೈತ ಸ್ನೇಹಿ ಬ್ಯಾಂಕಾಗಿ ಗುರುತಿಸಿಕೊಂಡಿರುವ ಎಸ್‌ಸಿಡಿಸಿಸಿ ಬ್ಯಾಂಕ್ ಸುಸಜ್ಜಿತ ಕಟ್ಟಡವನ್ನು ಹೊಂದಿದ್ದು, ಆಧುನಿಕ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರಕುಮಾರ್ ಅವರು ಬ್ಯಾಂಕಿನ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು. ಬ್ಯಾಂಕ್ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 113 ಶಾಖೆಗಳನ್ನು ಹೊಂದಿದ್ದು, ಜನಸಾಮಾನ್ಯರ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುತ್ತಿದೆ. ಸ್ವಸಹಾಯ ಸಂಘಗಳ ಕಾರ್ಯನಿರ್ವಹಣೆಯಲ್ಲೂ ಬ್ಯಾಂಕ್ ಸಮರ್ಪಕವಾಗಿ ಕಾರ್ಯನಿರ್ವಹಿಸಿ ಸುಮಾರು 32000ಕ್ಕೂ ಹೆಚ್ಚು ನವೋದಯ ಸಂಘಗಳು ರಚನೆ ಮಾಡಿದ್ದು, ಸುಮಾರು 3.50 ಲಕ್ಷಕ್ಕೂ ಹೆಚ್ಚು ಮಂದಿ ನವೋದಯ ಸ್ವಸಹಾಯ ಸಂಘದಲ್ಲಿದ್ದಾರೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಅಪೆಕ್ಸ್ ಬ್ಯಾಂಕ್ ನೂತನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಗದೀಶ್ ಎಂ.ಕೆ. ಅವರನ್ನು ಬ್ಯಾಂಕ್ ವತಿಯಿಂದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಸನ್ಮಾನಿಸಿದರು.
ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ್ ಎಚ್.ಎನ್., ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸುಧೀರ್ ಕುಮಾರ್, ಬಜ್ಪೆ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಡೆನ್ನೀಸ್ ಡಿ’ಸೋಜಾ ಹಾಗೂ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ ಬೆರ್ನಾಡ್ ಉಪಸ್ಥಿತರಿದ್ದರು.