
ಮಸಾಜ್ ಸೆಂಟರ್‌ಗೆ ರಾಮ ಸೇನೆ ದಾಳಿ: ಮುಖ್ಯಸ್ಥ ಪ್ರಸಾದ್ ಅತ್ತಾವರ ಸೆರೆ
ಮಂಗಳೂರು: ನಗರದ ಬಿಜೈ ಕೆಎಸ್‌ಆರ್‌ಟಿಸಿ ಬಳಿ ಕಾರ್ಯಾಚರಿಸುತ್ತಿದ್ದ ಮಸಾಜ್ ಸೆಂಟರ್‌ಗೆ ರಾಮ ಸೇನೆಯ ಕಾರ್ಯಕರ್ತರು ದಾಳಿ ನಡೆಸಿ, ಪಾರ್ಲರ್‌ನ ಗಾಜು, ಪೀಠೋಪಕರಣ ಧ್ವಂಸ ಮಾಡಿರುವ ಘಟನೆ ಗುರುವಾರ ಸುಮಾರು 12ರ ವೇಳೆಗೆ ನಡೆದಿದೆ.
ಮಂಗಳೂರಿನ ಬಿಜೈ ಕೆಎಸ್‌ಆರ್‌ಟಿಸಿ ಬಳಿಯಿರುವ ಕಲರ್ಸ್ ಯೂನಿ ಸೆಕ್ಸ್ ಹೆಸರಿನ ಮಸಾಜ್ ಪಾರ್ಲರ್ ಮೇಲೆ ರಾಮ ಸೇನೆಯ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಮಸಾಜ್ ಸೆಂಟರ್‌ನಲ್ಲಿ ಅನೈತಿಕ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಸಂಘಟನೆ, ಮಸಾಜ್ ಸೆಂಟರ್ ಮೇಲೆ ದಾಳಿ ನಡೆಸಿ ಪೀಠೋಪಕರಣ ಹಾಗೂ ಗಾಜುಗಳನ್ನು ಧ್ವಂಸ ಮಾಡಿದೆ. ಸೆಲೂನ್‌ನಲ್ಲಿದ್ದ ಯುವತಿಯರಿಗೆ ಬೆದರಿಕೆ ಹಾಕಿದ್ದಾರೆ. ಸೆಲೂನ್ ಮಾಲಕರು ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್, ’ಇಂದು 11.51ರ ಸುಮಾರಿಗೆ, ಬಿಜೈನ ಆದಿತ್ಯ ಕಾಂಪ್ಲೆಕ್ಸ್ ಬಳಿಯ ಕಲರ್ಸ್ ಯುನಿಸೆಕ್ಸ್ ಸಲೂನ್ಗೆ 9ರಿಂದ 10 ಜನರ ಅಪರಿಚಿತ ವ್ಯಕ್ತಿಗಳ ಗುಂಪು ಅಕ್ರಮವಾಗಿ ಪ್ರವೇಶಿಸಿ ಆಸ್ತಿಗೆ ಹಾನಿ ಉಂಟುಮಾಡಿದೆ. ಸಿಬ್ಬಂದಿ ಮೇಲೆ ಅನೈತಿಕ ಚಟುವಟಿಕೆಗಳ ಆರೋಪ ಹೊರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಮತ್ತು ಅವರಿಗೆ ಮತ್ತಷ್ಟು ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ ಎಂದರು.
’ಈ ಗುಂಪು ಸಲೂನ್ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಹಾನಿಗೊಳಿಸಿದೆ. ಘಟನೆಯ ಸಮಯದಲ್ಲಿ ಇಬ್ಬರು ಸಿಬ್ಬಂದಿಯ ಮೇಲೆಯೂ ಹಲ್ಲೆ ನಡೆಸಲಾಗಿದೆ. ಒಳಗೆ ನುಗ್ಗಿದವರಲ್ಲಿ ಒಬ್ಬರು ಘಟನೆಯನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಮುಚ್ಚಲು ಆಗ್ರಹ..:
ಮಂಗಳೂರು ನಗರದಾದ್ಯಂತ ಇರುವ ಮಸಾಜ್ ಸೆಂಟರ್‌ಗಳನ್ನು ಮುಚ್ಚುವಂತೆ ರಾಮಸೇನಾ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಪ್ರಸಾದ್ ಅತ್ತಾವರ ಬಂಧನ..:
ಮಸಾಜ್ ಸೆಂಟರ್ ದಾಳಿಗೆ ಸಂಬಂಧಿಸಿ ಶ್ರೀರಾಮ ಸೇನಾ ಸಂಸ್ಥಾಪಕ ಪ್ರಸಾದ್ ಅತ್ತಾವರನನ್ನು ಕುಡುಪು ಬಳಿಯ ಆತನ ನಿವಾಸದಿಂದ ಬಂಧಿಸಿದ್ದಾರೆ. ಆತ ತನ್ನ ನಿವಾಸದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವಾಗಲೇ ಸಿಸಿಬಿ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಈ ವೇಳೆ ಮಸಾಜ್ ಸೆಂಟರ್ ದಾಳಿ ನಾವೇ ನಡೆಸಿದ್ದಾಗಿ ಪ್ರಸಾದ್ ಅತ್ತಾವರ ಒಪ್ಪಿಕೊಂಡಿದ್ದಾನೆ. ಪ್ರಸಾದ್ ಅತ್ತಾವರ ಮನೆಯಲ್ಲಿ ಉಳಿದ ಕಾರ್ಯಕರ್ತರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಬೆದರಿಕೆ..:
ಯುವತಿಯರಿಗೆ, ನೀವು ವೈಶ್ಯಾವಾಟಿಕೆ ದಂಧೆ ನಡೆಸುತ್ತಿದ್ದೀರಾ ಎಂದು ದಾಳಿಕೋರರು ಆವಾಜ್ ಹಾಕಿದ್ದಾರೆ. ಯುವತಿಯರು ಕೈಮುಗಿದು ಹಲ್ಲೆ ಮಾಡಬೇಡಿ ಎಂದು ಬೇಡಿಕೊಳ್ಳುವ ವಿಡಿಯೋ ಇದೆ. ಕಾರ್ಯಕರ್ತರೇ ಜೊತೆಗೆ ಕ್ಯಾಮರಾಮನ್ ಒಬ್ಬನನ್ನು ಕರೆದೊಯ್ದು ದಾಳಿ ನಡೆಸಿರುವ ಸಾಧ್ಯತೆ ಇದ್ದು, ಇದರ ವಿಡಿಯೋವನ್ನು ದಾಳಿಕೋರರೇ ಬಿಡುಗಡೆ ಮಾಡಿದ್ದಾರೆ. ಈ ಮಸಾಜ್ ಪಾರ್ಲರ್ ಒಂದು ವರ್ಷದಿಂದ ಆರಂಭವಾಗಿದ್ದು, ಸುಧೀರ್ ಎಂಬವರಿಗೆ ಸೇರಿದ್ದು.