
ಯಕ್ಷಗಾನ ತಾಳಮದ್ದಳೆಯ ಹಿರಿಯ ಅರ್ಥಧಾರಿ ಬರೆ ಕೇಶವ ಭಟ್ ನಿಧನ
ಮಂಗಳೂರು: ಯಕ್ಷಗಾನ ತಾಳಮದ್ದಳೆಯ ಹಿರಿಯ, ಶ್ರೇಷ್ಠ ಅರ್ಥಧಾರಿಗಳಲ್ಲೊಬ್ಬರಾದ ಬರೆ ಕೇಶವ ಭಟ್(84) ಅವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ ಬರೆ ಎಂಬಲ್ಲಿ ಕೇಶವ ಭಟ್ಟರು 30-10-1941ರಂದು ಬರೆ ವೆಂಕಟ್ರಮಣ ಭಟ್ಟ ಮತ್ತು ಗೌರಿ ದಂಪತಿಗಳ ಮಗನಾಗಿ ಜನಿಸಿದರು. ಕೈರಂಗಳ ಮತ್ತು ವಿಟ್ಲ ಶಾಲೆಗಳಲ್ಲಿ ಓದಿದ ಇವರದು ಕೃಷಿ ಕುಟುಂಬ. ನಂತರ ಮಂಗಳೂರು ಶಿಕ್ಷಕರ ತರಬೇತಿ ಕೇಂದ್ರದಲ್ಲಿ ವಿದ್ಯಾರ್ಜನೆ ಪೂರೈಸಿದರು. ಕೈರಂಗಳ ಶಾಲೆಯಲ್ಲಿ 1 ವರ್ಷ, ಶಿರಂಕಲ್ಲು ಶಾಲೆಯಲ್ಲಿ 3 ವರ್ಷ, ನಂತರ ನಿರಂತರ 31 ವರ್ಷಗಳ ಕಾಲ ಅಡ್ಯನಡ್ಕ ಜನತಾ ವಿದ್ಯಾ ಸಂಸ್ಥೆಯಲ್ಲಿ ಅಧ್ಯಾಪಕ ನಾಗಿದ್ದರು.
ಕೈರಂಗಳ ಯಕ್ಷಗಾನ ಸಂಘದ ಆಟದಲ್ಲಿ ಮೊತ್ತಮೊದಲು ನಾರದನಾಗಿ ರಂಗವೇರಿದ ಇವರು ಹೆಜ್ಜೆಗಾರಿಕೆ ಅಭ್ಯಸಿಸದಿದ್ದರೂ ಹಿರಣ್ಯಕಶ್ಯಪ, ಮಯೂರಧ್ವಜ ಮುಂತಾದ ಪಾತ್ರಗಳನ್ನು ನಿರ್ವಹಿಸಿದರು. ಅಲ್ಲದೆ ತಾಳಮದ್ದಳೆ ಕೂಟಗಳಲ್ಲೂ ಮಿಂಚಿದರು.
1999ನೇ ಇಸವಿ ತನ್ನ ೫೮ನೇ ವಯಸ್ಸಿನಲ್ಲಿ ವೃತ್ತಿ ಜೀವನದಿಂದ (ಅಧ್ಯಾಪಕ) ನಿವೃತ್ತರಾಗಿದ್ದರೂ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಪ್ರಸ್ತುತ ವಯಸ್ಸು ಮತ್ತು ಆರೋಗ್ಯದ ಸಮಸ್ಯೆಯಿಂದಾಗಿ ಕೂಟಗಳಲ್ಲಿ ಕಲಾವಿದನಾಗಿ ಕಾಣಿಸಿಕೊಳ್ಳದಿದ್ದರೂ ಪ್ರೇಕ್ಷಕರಾಗಿ ಕಾಣಿಸಿಕೊಳ್ಳುತ್ತಿದ್ದರು. ಶೇಣಿ ಪ್ರಶಸ್ತಿ, ದೇರಾಜೆ ಪ್ರಶಸ್ತಿ, ಪುತ್ತೂರು ಯಕ್ಷಾಂಜನೇಯ ಪ್ರಶಸ್ತಿ, ಅಲ್ಲದೆ ಅನೇಕ ಸಂಘ-ಸಂಸ್ಥೆಗಳು ಬರೆ ಕೇಶವ ಭಟ್ಟರನ್ನು ಗುರುತಿಸಿ ಗೌರವಿಸಿವೆ.
ಬಂಟ್ವಾಳ ತಾಲೂಕು ಇರಾ ಗ್ರಾಮದ ಸಣ್ಣಯಬೈಲು ಎಂಬಲ್ಲಿ ಪತ್ನಿ ದುರ್ಗಾಪರಮೇಶ್ವರೀ ಮತ್ತು ಇಬ್ಬರು ಪುತ್ರರೊಂದಿಗೆ ವಾಸಿಸುತ್ತಿದ್ದಾರೆ.