
ಮನಸ್ಸಿನ ಶಕ್ತಿಯನ್ನು ನಿಯಂತ್ರಿಸಲು ಪ್ರಾಣಾಯಾಮ: ಸ್ವಾಮಿ ಶ್ರೀ ಜಿತಕಾಮಾನಂದಜೀ ಮಹಾರಾಜ್
Friday, January 24, 2025
ಮಂಗಳೂರು: ಪ್ರಾಣಾಯಾಮವು ಭಾರತದಲ್ಲಿನ ಯೋಗಾಭ್ಯಾಸಗಳಿಂದ ಹುಟ್ಟಿಕೊಂಡ ಒಂದು ಪ್ರಾಚೀನ ಉಸಿರಾಟದ ತಂತ್ರವಾಗಿದೆ. ಇದು ವಿಭಿನ್ನ ಶೈಲಿಗಳಲ್ಲಿ ನಿಮ್ಮ ಉಸಿರಾಟವನ್ನು ನಿಯಂತ್ರಿಸುವುದನ್ನು ಒಳಗೊಂಡಿರುತ್ತದೆ ಎಂದು ಆಶ್ರಮದ ಅಧ್ಯಕ್ಷ ಸ್ವಾಮಿ ಶ್ರೀ ಜಿತಕಾಮಾನಂದಜೀ ಮಹಾರಾಜ್ ಹೇಳಿದರು.
ಮಂಗಳೂರು ನಗರದ ಮಂಗಳಾದೇವಿ ಸಮೀಪದಲ್ಲಿರುವ ಶ್ರೀ ರಾಮಕೃಷ್ಣಮಠದಲ್ಲಿ ನಡೆಯುವ ಎರಡು ವಾರಗಳ ಕಾಲ ಜರುಗಿದ ಯೋಗ ಶಿಬಿರ ಸಮರೋಪ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಪ್ರಾಣಾಯಾಮ ಅಭ್ಯಾಸದಿಂದ ಬರುವ ಅನೇಕ ಆರೋಗ್ಯ ಪ್ರಯೋಜನಗಳಿಂದಾಗಿ ಇದು ಇತ್ತೀಚೆಗೆ ಪಾಶ್ಚಿಮಾತ್ಯ ಜಗತ್ತಿನಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಪ್ರಾಣಾಯಾಮವನ್ನು ಸಾಮಾನ್ಯವಾಗಿ ಯೋಗದ ಜೊತೆಗೆ ಅಭ್ಯಾಸ ಮಾಡಲಾಗುತ್ತದೆ. ಇದನ್ನು ಯೋಗದ ನಾಲ್ಕನೇ ಅಂಗ ಎಂದು ಕರೆಯಲಾಗುತ್ತದೆ ಎಂದರು.
ಪ್ರಾಣಾಯಾಮವನ್ನು ವಿಜ್ಞಾನ ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಉಸಿರನ್ನು ನಿಯಂತ್ರಿಸುವ ಮೂಲಕ ನಿಮ್ಮ ಮನಸ್ಸಿನ ಶಕ್ತಿಯನ್ನು ನಿಯಂತ್ರಿಸಬಹುದು ಎಂದು ನಂಬಲಾಗಿದೆ. ಪ್ರಾಣಾಯಾಮ ಅಭ್ಯಾಸದ ಮೂಲಕ ನೀವು ನಿಮ್ಮ ಅಂತರಿಕ ಶಕ್ತಿಯನ್ನು ನಿಯಂತ್ರಿಸಬಹುದು ಎಂದು ಭಾವಿಸಲಾಗಿದೆ ಎಂದು ಹೇಳಿದರು.
ದೇಲಂಪಾಡಿ ಯೋಗ ಪ್ರತಿಷ್ಠಾನದ ಯೋಗ ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಶಿಬಿರಾರ್ಥಿಗಳಿಗೆ ಯೋಗದ ಮಹತ್ವ ಪ್ರಯೋಜನಗಳನ್ನು ತಿಳಿಸಿದರು.
ಯೋಗ ತಂತ್ರಗಳು ರೋಗಲಕ್ಷಣಗಳನ್ನು ಕಡಿಮೆ ಮಾಡುವುದಲ್ಲದೇ ನೈಜ ಕಾರಣವನ್ನು ತೆಗೆದು ಹಾಕುವಲ್ಲಿ ಸಹಕಾರಿಯಾಗುವುದು. ಕಷ್ಟಕರವಾದ ಯೋಗ ಭಂಗಿಗಳಿಗೆ ದೈಹಿಕ ಮತ್ತು ಮಾನಸಿಕ ತರಬೇತಿಯ ಅಗತ್ಯವಿರುತ್ತದೆ. ಆದ್ದರಿಂದ ಅವುಗಳನ್ನು ಸಾಧಿಸಲು ಸಮಯ ತೆಗೆದುಕೊಳ್ಳುತ್ತದೆ. ತಾಳ್ಮೆ, ಸಮರ್ಪಿತ ಭಾವನೆ ನಿಯಮಿತ ಅಭ್ಯಾಸ ಅಗತ್ಯವಿದೆ. ನುರಿತ ಯೋಗ ಶಿಕ್ಷಕರೊಂದಿಗೆ ಕಠಿಣ ಆಸನಗಳನ್ನು ಅಭ್ಯಾಸಮಾಡಿ. ಸುಧಾರಿತ ಯೋಗ ಭಂಗಿಗಳಿಗೆ ದೈಹಿಕ ಮಟ್ಟದಲ್ಲಿ ಸಮತೋಲನ, ನಮ್ಯತೆ ಮತ್ತು ಶಕ್ತಿ ಅಗತ್ಯವಿರುತ್ತದೆ.
ಆರಂಭದಲ್ಲಿ ಸರಳ ಆಸನಗಳನ್ನು ಮೂರು ತಿಂಗಳು ಮಾಡಿ ಅಭ್ಯಾಸಮಾಡಿ. ಆನಂತನ ನುರಿತ ಯೋಗ ಶಿಕ್ಷಕರ ಸಮ್ಮುಖದಲ್ಲಿ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿ. ಕಠಿಣ ಆಸನಗಳನ್ನು ಹಂತ ಹಂತವಾಗಿ ಕಲಿಯಿರಿ. ಬೆನ್ನು, ಸೊಂಟ ಬಿಗಿತ ಹೋಗಲು ಶಿಕ್ಷಕರು ಸೂಚಿಸಿದ ವ್ಯಾಯಾಮಗಳನ್ನು ಅಭ್ಯಾಸಮಾಡಿ. ಕಾಲಾನಂತರಲ್ಲಿ ನೀವು ಆಸನವನ್ನು ಸ್ಥಿರವಾಗಿ ಮಾಡಿದಾಗ ಬಲವಾದ, ಸುಲಭವಾಗಿ ಹೆಚ್ಚು ಸವಾಲಿನ ಭಂಗಿಗಳು ಕೈವಶವಾಗುತ್ತದೆ. ಶಿಸ್ತು, ಸತತ ಪ್ರಯತ್ನ ಧೃಡನಂಬಿಕೆಯಿಂದ ಅಭ್ಯಾಸಮಾಡಿ, ನಿಯಮಿತವಾಗಿ ಎಷ್ಟು ಸಮಯ ಅಭ್ಯಾಸ ಮಾಡುತ್ತಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ದೇಲಂಪಾಡಿ ಶಿಷ್ಯರಾದ ಸುಮಾ, ಕಾರ್ತಿಕ್, ಚಂದ್ರಹಾಸ ಬಾಳ ಹಾಗೂ ಶ್ರೀಲಕ್ಷ್ಮೀ ಇವರು ಸಹಕರಿಸಿದರು. ಯೋಗ ತರಬೇತಿ ನೀಡಿದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರನ್ನು ಶಿಬಿರಾರ್ಥಿಗಳು ಗೌರವಿಸಿದರು.