
ಚಿಕಿತ್ಸೆ ಪಡೆಯುತ್ತಿದ್ದ ಯುವಕ ಹೃದಯಾಘಾತದಿಂದ ನಿಧನ
ಮಂಜೇಶ್ವರ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಇಂದು ಮುಂಜಾನೆ ನಡೆದಿದೆ. ಮೀಯಪದವು ಬಳಿಯ ಬಾಳಿಯೂರು ಪರಂದರಗುರಿ ನಿವಾಸಿ ದಿ. ಪದ್ಮನಾಭ ಪೂಜಾರಿಯವರ ಸುಪುತ್ರ ಪೇಂಟಿಂಗ್ ಕಾರ್ಮಿಕ ಚೇತನ್ ಕುಮಾರ್ (24) ಮೃತಪಟ್ಟ ಯುವಕ. ಡಿಸೆಂಬರ್ 31 ರಂದು ರಾತ್ರಿ ಮಂಗಳೂರಿನಲ್ಲಿ ನಡೆದ ಹೊಸ ವರ್ಷದ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ತನ್ನ ಬೈಕ್ ನಲ್ಲಿ ಮನೆಗೆ ಹಿಂತಿರುಗುತ್ತಿದ್ದ ಮಧ್ಯೆ ಎದುರು ಭಾಗದಿಂದ ಬಂದ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ತಲೆಗೆ ಹಾಗೂ ಮುಖಕ್ಕೆ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದನು.
ಆರ್ಥಿಕವಾಗಿ ಸಂಕಷ್ಟದ ಬದುಕಿನಲ್ಲಿ ತನ್ನ ತಾಯಿಯ ಜೊತೆ ಜೀವನ ನಡೆಸುತ್ತಿದ್ದ ಚೇತನ್ ನ ಮುಂದುವರಿದ ಚಿಕಿತ್ಸೆಗಾಗಿ ಚಿಗುರುಪಾದೆ ಯುವಧಾರ ಫ್ರೆಂಡ್ಸ್ ಕ್ಲಬ್ ನ ವತಿಯಿಂದ ನಾಡಿನ ದಾನಿಗಳಿಂದ ಹಣ ಸಂಗ್ರಹ ನಡೆಸಿ, ಸುಮಾರು 75,000 ದಷ್ಟು ಮೊತ್ತವನ್ನು ಸಂಗ್ರಹಿಸಿ, ಚಿಕಿತ್ಸೆಗಾಗಿ ನೀಡಲಾಗಿತ್ತು. ಈ ನಡುವೆ ಉನ್ನತ ಚಿಕಿತ್ಸೆ ಮುಂದುವರಿಯುತ್ತಿದ್ದಂತೆ ಇಂದು ಮುಂಜಾನೆ 1 ಗಂಟೆ ವೇಳೆ ಹೃದಯಾಘಾತಗೊಂಡು ಚೇತನ್ ಮೃತಪಟ್ಟಿದ್ದಾನೆ.
ಮೃತಪಟ್ಟ ಚೇತನ್ ಕುಮಾರ್ ತಾಯಿ: ಜಾನಕಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಶವ ಮಹಜರು ನಡೆಸಿದ ಬಳಿಕ ಮನೆಗೆ ತಂದು ಮನೆ ಪರಿಸರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.