
ಕಾರ್ಮಿಕರಿಗೆ ಹಲ್ಲೆ: ಮೂವರ ಬಂಧನ
ಉಳ್ಳಾಲ: ಕ್ಷುಲ್ಲಕ ಕಾರಣಕ್ಕೆ ಸಂಬಂಧಿಸಿ ಮಾಡೂರು ಬಳಿ ಬಾಡಿಗೆ ಕೊಠಡಿಗೆ ನುಗ್ಗಿ ಪಶ್ಚಿಮ ಬಂಗಾಳ ಮೂಲದ ಏಳು ಮಂದಿ ಕಾರ್ಮಿಕರಿಗೆ ತಂಡವೊಂದು ಹಲ್ಲೆ ಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪೃಥ್ವಿ ರಾಹುಲ್,ಗುರು ಮೂರ್ತಿ ಹಾಗೂ ಸಿಂಚನ ಎಂದು ಗುರುತಿಸಲಾಗಿದೆ. ತಲೆಮರೆಸಿಕೊಂಡಿರುವ ಈ ಹಲ್ಲೆ ಪ್ರಕರಣದ ಉಳಿದ ಆರೋಪಿಗಳಾದ ರಾಹುಲ್ ಪೂಜಾರಿ, ರಾಕೇಶ್ ಬಜ್ಪೆ ಹಾಗೂ ಉಮೇಶ್ ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಆರೋಪಿಗಳು ಮಂಗಳವಾರ ರಾತ್ರಿ ಪಶ್ಚಿಮ ಬಂಗಾಳ ಮೂಲದ ದೀಪಂಕರ್ ದಾಸ್,ಬೈಪಾಲವ್ ದಾಸ್ ಗಣೇಶ ಬೈಡಿಯಾ, ಆಕಾಶ್ ಗಯಾನ್, ಧನಂಜಯ ಮೊಂಡಾಲ್, ರಾಹುಲ್, ಪ್ರಶಾಂತ್ ಗೆ ಕ್ಷುಲ್ಲಕ ಕಾರಣಕ್ಕೆ ಅವರ ಬಾಡಿಗೆ ಕೊಠಡಿಗೆ ನುಗ್ಗಿ ಅವಾಚ್ಯ ಶಬ್ದ ಗಳಿಂದ ಬೈದು ಹಲ್ಲೆ ನಡೆಸಿದ್ದರು.
ಇದರಿಂದ ಏಳು ಮಂದಿ ಗಂಭೀರ ಗಾಯಗೊಂಡು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ದೀಪಂಕರ್ ದಾಸ್ ನೀಡಿದ ದೂರಿನಂತೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದೆ.