
ಆಯುಷ್ಮಾನ್ ಯೋಜನೆಯಲ್ಲೂ ರಾಜ್ಯ ಸರಕಾರ ರಾಜಕೀಯ: ಸುರಭಿ ಹೊಡಿಗೆರೆ ಆರೋಪ
ಮಂಗಳೂರು: ಕೇಂದ್ರ ಸರ್ಕಾರ 70ಕ್ಕಿಂತ ಜಾಸ್ತಿ ವಯೋಮಾನದವರಿಗೆ ಜಾರಿಗೊಳಿಸಿದ ಆಯುಷ್ಮಾನ್ ಆರೋಗ್ಯ ಯೋಜನೆಯನ್ನು ರಾಜ್ಯ ಸರ್ಕಾರ ರಾಜಕೀಯ ಕಾರಣಕ್ಕೆ ಕಾರ್ಯರೂಪಕ್ಕೆ ತರುತ್ತಿಲ್ಲ. ಇದರಿಂದಾಗಿ ಬಡವರಿಗೆ ತೊಂದರೆಯಾಗುತ್ತಿದೆ ಎಂದು ರಾಜ್ಯ ಬಿಜೆಪಿ ವಕ್ತಾರೆ ಸುರಭಿ ಹೊಡಿಗೆರೆ ಆರೋಪಿಸಿದ್ದಾರೆ.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಶಿಶು, ಬಾಣಂತಿ ಸಾವು, ಆಯುಷ್ಮಾನ್‌ನಡಿ ಚಿಕಿತ್ಸೆಗೆ ಅವಕಾಶ ಸಿಗದೆ ವೃದ್ಧರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ತನ್ನ ಪಾತ್ರ ಏನು ಎಂಬ ಬಗ್ಗೆ ಜವಾಬ್ದಾರಿಯುತವಾಗಿ ವರ್ತಿಸದೆ ಕೇಂದ್ರ ಸರ್ಕಾರದತ್ತ ಬೆರಳು ತೋರಿಸುತ್ತಿದೆ. ಇದು ನಾಚಿಕಗೇಡಿನ ಸಂಗತಿಯಾಗಿದೆ. ಬಾಣಂತಿಯರ ಸಾವು, ಔಷಧ ಪೂರೈಕೆಯಲ್ಲಿನ ನ್ಯೂನತೆಗಳ ಬಗ್ಗೆ ಮೊದಲೇ ವೈದ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದರೂ ಸರ್ಕಾರ ಕಣ್ಣುಚ್ಚಿ ಕುಳಿತಿರುವುದೇ ಇಷ್ಟೆಲ್ಲ ಗೊಂದಲಗಳಿಗೆ ಕಾರಣವಾಗಿದೆ ಎಂದರು.
ಆರೋಗ್ಯ ಸಚಿವರು ಕೇವಲ ಟ್ವೀಟರ್ನಲ್ಲೇ ಮಗ್ನರಾಗಿರುವುದು ಬಿಟ್ಟರೆ, ಹಿರಿಯ ನಾಗರಿಕರ ಬಗ್ಗೆ ಜನಪರ ಕಾಳಜಿ ತೋರುತ್ತಿಲ್ಲ. ಕೇಂದ್ರದ 2.2 ಆವಾಸ್ ಯೋಜನೆಯಲ್ಲಿ ದೇಶದ 29 ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಿದ್ದರೂ ಅದರಲ್ಲಿ ಕರ್ನಾಟಕ ರಾಜ್ಯ ಸೇರ್ಪಡೆಯಾಗಿಲ್ಲ. ಇದು ಕೂಡ ರಾಜ್ಯ ಸರ್ಕಾರದ ರಾಜಕೀಯಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಪ್ರತಿಯೊಂದು ವಿಚಾರಕ್ಕೂ ಕೇಂದ್ರದತ್ತ ಕೈತೋರಿಸುವ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಅವರಿಗೆ ಉಳಿದ ಬೆರಳುಗಳು ಕೂಡ ತಮ್ಮತ್ತ ತೋರಿಸುತ್ತವೆ ಎಂಬುದು ಜ್ಞಾಪಕದಲ್ಲಿರಲಿ. ಎಲ್ಲದಕ್ಕೂ ಕೇಂದ್ರದ ಮೇಲೆ ಆರೋಪಿಸಿದರೆ, ನೀವು ಏನು ಮಾಡುತ್ತೀರಿ? ಮೊಂಡು ಬುದ್ಧಿಯ ಕಾಂಗ್ರೆಸ್ ವಿರುದ್ಧ ಬಿಜೆಪಿಯ ಹೋರಾಟ ಮುಂದುವರಿಯಲಿದೆ ಎಂದರು.
ಬಿಜೆಪಿಯಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದಾರೆ. ತಳಮಟ್ಟದಲ್ಲಿ ಕಾರ್ಯಕರ್ತರು ಶಕ್ತಿಮೀರಿ ಹೋರಾಟ ನಡೆಸುತ್ತಿದ್ದಾರೆ. ಇನ್ನು ಐದಾರು ತಿಂಗಳಲ್ಲಿ ನಮ್ಮ ಹೋರಾಟದ ಫಲ ಕಾಣಲಿದೆ ಎಂದು ಪ್ರಶ್ನೆಯೊಂದಕ್ಕೆ ಸುರಭಿ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಾಜಗೋಪಾಲ ರೈ, ಸತೀಶ್ ಪ್ರಭು, ಡೊಂಬಯ್ಯ ಅರಳ, ವರುಣ್ ರಾಜ್, ಅರುಣ್ ಶೇಟ್, ವಸಂತ ಪೂಜಾರಿ ಉಪಸ್ಥಿತರಿದ್ದರು.