ವೀರಪ್ಪ ಮೊಯಿಲಿ ಮಹಾಕಾವ್ಯ ಸಂಪುಟ ಲೋಕಾರ್ಪಣೆ

ವೀರಪ್ಪ ಮೊಯಿಲಿ ಮಹಾಕಾವ್ಯ ಸಂಪುಟ ಲೋಕಾರ್ಪಣೆ


ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮತ್ತು ಸಪ್ನ ಬುಕ್ ಹೌಸ್ ಬೆಂಗಳೂರು ಇದರ ವತಿಯಿಂದ ವಿದ್ಯಾಗಿರಿಯ ಡಾ. ವಿ.ಎಸ್. ಆಚಾರ್ಯ ಸಭಾಭವನದಲ್ಲಿ ಭಾನುವಾರ ಮಾಜಿ ಮುಖ್ಯಮಂತ್ರಿ, ಸಾಹಿತಿ ಡಾ. ಎಂ. ವೀರಪ್ಪ ಮೊಯಿಲಿ ಅವರ ‘ವಿಶ್ವ ಸಂಸ್ಕೃತಿಯ ಮಹಾಯಾನ-ಸಂಪುಟ 2’ ಗದ್ಯ ಮಹಾಕಾವ್ಯವನ್ನು ಮೈಸೂರು ವಿವಿಯ ವಿಶ್ರಾಂತ ಪ್ರಾಧ್ಯಾಪಕ, ವಿಮರ್ಶಕ ಪ್ರೊ. ಸಿ. ನಾಗಣ್ಣ ಲೋಕಾರ್ಪಣೆಗೊಳಿಸಿದರು.

ನಂತರ ಮಾತನಾಡಿದ ಅವರು ಡಾ. ಎಂ. ವೀರಪ್ಪ ಮೊಯಿಲಿ ಅವರ ‘ವಿಶ್ವ ಸಂಸ್ಕೃತಿಯ ಮಹಾಯಾನ-ಸಂಪುಟ 2’ ಗದ್ಯ ಮಹಾಕಾವ್ಯ ಭಾರತದ ಅಧ್ಭುತ ನಾಗರೀಕತೆಯ ಅನಾವರಣ ಮಾತ್ರವಲ್ಲ ಚರಿತ್ರೆಯ ಅನಾವರಣವೂ ಆಗಿದೆ. ಇತಿಹಾಸದ ಸವಾಲುಗಳನ್ನು ವಿಜ್ಞಾನದ ಜತೆಗೆ ಮನೋವಿಜ್ಞಾನದ ದೃಷ್ಟಿಕೋನದಿಂದ ಅವಲೋಕಿಸಿ ಮಥಿಸಿದ ಈ ಮಹಾಕಾವ್ಯ ಅವತರಿಸಿರುವುದು ನಿಜಾರ್ಥದಲ್ಲಿ ಭುವನದ ಭಾಗ್ಯ. ವೈಚಾರಿಕ ನೆಲೆಗಟ್ಟಿನಲ್ಲಿ ಸ್ಪರ್ಧೆ, ಸಂಘರ್ಷಕ್ಕಿಂತ ಎಲ್ಲರ ಸಾಮರಸ್ಯ, ಹಿತ ಚಿಂತನೆಯೊಂದಿಗೆ ಅರಳಿರುವ ಈ ಮಹಾಕಾವ್ಯ ಗದ್ಯಸಾಹಿತ್ಯದ ಹೊಸ ಸ್ವರೂಪವಾಗಿದೆ ಎಂದು ಹೇಳಿದರು. 


ಬಹಿರಂಗದಲ್ಲಿ ಜನಕಲ್ಯಾಣದ ಮನೋಭಾವದ ಮೊಯಿಲಿಯವರು ಅಂತರಂಗದ ಚಿಂತನೆಗಳಿಗೂ ಅಕ್ಷರದ ರೂಪ ನೀಡಿ ಸಾಹಿತ್ಯ ರಂಗಕ್ಕೆ ಸಮೃದ್ಧತೆ ಒದಗಿಸಿದ್ದಾರೆ. ವಿಲ್ ಡ್ಯುರಾಂಟ ಅವರ ನಾಗರೀಕತೆಯ ಕೃತಿಗೆ ಸಮನಾಗಿ ಮೊಯಿಲಿಯವರ ಮಹಾಕಾವ್ಯ ಮೂಡಿಬಂದಿದೆ ಎಂದವರು ಶ್ಲಾಘಿಸಿದರು.

ಮೂಡುಬಿದಿರೆ ಶ್ರೀ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀತರ್ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ ಮೊಯಿಲಿ ಅವರು ರಾಜಕಾರಣವನ್ನು ಬದಿಗೆ ಸರಿಸಿ ಸಾಹಿತಿಯಾಗಿ ದಾರ್ಶನಿಕರಾಗಿ ಇನ್ನಷ್ಟು ಕೊಡುಗೆ ನೀಡಬೇಕಾಗಿದೆ ಎಂದರು. ಆತ್ಮ ಪರಮಾತ್ಮನಾಗುವ ಸಂಸ್ಕೃತಿ ಇಂದಿನ ಅಗತ್ಯವಾಗಿದೆ. ಮೊಯಿಲಿಯವರ ಸಾಹಿತ್ಯ ಕಪಾಟುಗಳಿಗೆ ಸೀಮಿತವಾಗದೇ ಅದರ ಕುರಿತು ನಾಡಿನ ನಾಲ್ಕೂ ಮೂಲೆಗಳಲ್ಲಿ ತತ್ವಶಾಸ್ತ್ರೀಯ ಚಿಂತನೆಗಳಿಗೆ ವೇದಿಕೆಯಾಗಬೇಕಿದೆ ಎಂದರು.

ಕೃತಿಕಾರ ಡಾ. ಎಂ. ವೀರಪ್ಪ ಮೊಯಿಲಿ ಮಾತನಾಡಿ, ಉನ್ನತ ಶಿಕ್ಷಣದಲ್ಲಿ ಪ್ರಶ್ನಿಸುವ ಪರಿಣತಿ, ಸಂವಾದವೇ ನಿಜವಾದ ಜ್ಞಾನಮಾರ್ಗ. ಜಾಗತೀಕರಣವಾಗದ ಮಾನವ ಪ್ರಜ್ಞೆ, ವಿಜ್ಞಾನದಲ್ಲಿ ಉತ್ತರವಿಲ್ಲದ ದುರಹಂಕಾರೀ ಮನೋಭಾವ, ನಿಗೂಢತೆಯನ್ನು ಅರಿತಾಗ ನಾವು ಪರಿಪೂರ್ಣರಾಗುತ್ತೇವೆ. ಜಾಗತಿಕ ಅಶಾಂತಿಯ ಅಗ್ನಿಕುಂಡಗಳಾಗಿರುವ 19 ತಾಣಗಳು, ಸಮಕಾಲೀನ ಸಮಸ್ಯೆಗಳು, ಅಶಾಂತಿಗೆ ಪರಿಹಾರ ಕಾಣದ ಮತಗಳ ನಡುವೆ ಜಾಗತಿಕ ಶಾಂತಿಯೇ ಇಂದಿನ ಅಗತ್ಯ. ನೈತಿಕ ಮೌಲ್ಯಗಳ ತೀವ್ರ ಕುಸಿತದ ನಡುವೆ ಮಾನವತೆಗೆ ಸಾಕ್ಷಿಯಂತಿರುವ ಜಪಾನ್ ಮಾದರಿಯಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಉಳಿದ ಮೂರೂ ಸಂಪುಟಗಳು ಬಿಡುಗಡೆಯಾಗಲಿವೆ ಎಂದರು.  

ಆಶಯದ ನುಡಿಗಳನ್ನಾಡಿದ ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ ಮಾತನಾಡಿ, ಇಂದು ಸಂವಾದಗಳಿಗಿಂತ ವಿವಾದಕ್ಕೆ ಆದ್ಯತೆ, ಜ್ಞಾನದ ಕುರಿತ ಅವಜ್ಞೆ ಹೆಚ್ಚಿದೆ. ಅಧ್ಯಯನ ಶೀಲತೆ ಕಡಿಮೆಯಾಗುತ್ತಿದೆ. ಅನುಭವಗಳಿಂದ ಉದಯಿಸುವ ಚಿಂತನೆ ಶ್ರೇಷ್ಠತೆಯ ವ್ಯಸನವಿಲ್ಲದೇ ಎಲ್ಲರ ಧ್ವನಿಯನ್ನೂ ಗೌರವಿಸುವಂತಹದ್ದಾಗಬೇಕು. ಇಂತಹ ಸಹಸ್ರಾರು ಚಿಂತನೆಗಳ ಆಡುಂಬೋಲವೇ ವಿಶ್ವ ಸಂಸ್ಕೃತಿ. ಬಹುಶಿಸ್ತುಗಳ ಜ್ಞಾನ ಜಾಲ ಬೌದ್ಧಿಕ ಸಂವಾದದಿಂದ ಜತೆಗೂಡುತ್ತದೆ. ಇದಕ್ಕೆ ಅಗತ್ಯವಿರುವ ನಿರಂತರ ಅಧ್ಯಯನ ಶೀಲತೆಯಿಂದ ಮೊಯಿಲಿಯವರು ಗಾಂಧೀಜಿ, ಅಂಬೇಡ್ಕರ್, ರಾಮ ಮನೋಹರ್ ಲೋಹಿಯಾ ಅವರ ಸಾಲಿನ ಅಪರೂಪದ ರಾಜಕೀಯ ನೇತಾರನಾಗಿ ಗಮನ ಸೆಳೆಯುತ್ತಾರೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ಮೊಯಿಲಿಯವರು ಬರೇ ರಾಜಕಾರಣಿ ಎನ್ನುವುದಕ್ಕಿಂತ ಮುಖ್ಯವಾಗಿ ವಿಚಾರವಂತ, ಸಂಸ್ಕೃತಿ ಪ್ರಿಯ ರಾಜಕಾರಣಿ. ಪಾರದರ್ಶಕ, ದೂರದಶರ್ತ್ವದ ಅವರ ರಾಜಕಾರಣಕ್ಕೆ ಸಿಇಟಿ ಕ್ರಾಂತಿ, ಬೆಂಗಳೂರಿನಲ್ಲಿ ಐಟಿಬಿಟಿ, ಆಲಮಟ್ಟಿ ಡ್ಯಾಂ, ಬಿಜಾಪುರದ ಅಣು ಸ್ಥಾವರ ಎಲ್ಲವೂ ನಿದರ್ಶನ ಎಂದರು.

ಏನಿದೆ ಎನ್ನುವುದು ನಾಗರೀಕತೆಯಾದರೆ ಏನಾಗಿದ್ದೇವೆ ಎನ್ನುವುದು ಸಂಸ್ಕೃತಿ. ಸಾಹಿತ್ಯ ವಿಶ್ವ ಹೃದಯ ಬೆಸೆಯುವ ತಾಕತ್ತು ಹೊಂದಿದೆ. ಈ ನಿಟ್ಟಿನಲ್ಲಿ ಮೊಯಿಲಿಯವರ ಕೃತಿ ಭಾರತೀಯ ಸಾಂಸ್ಕೃತಿಕ ಯಾನವಾಗಿಯೂ ಗುರುತಿಸಲ್ಪಡುತ್ತದೆ ಎಂದರು.

ಸಮ್ಮಾನ, ಗೌರವ: ತನ್ನ ಮಹತ್ವದ ಕೃತಿ ಸಂಪುಟ ಹುಟ್ಟೂರಿನಲ್ಲೇ ಲೋಕಾರ್ಪಣೆಯಾಗುತ್ತಿರುವ ಸಂಭ್ರಮದ ಹಿನ್ನೆಲೆಯಲ್ಲಿ ತಮ್ಮ ಬದುಕಿನಲ್ಲಿ ಗಮನ ಸೆಳೆದ ಗುರು ಶತಾಯುಷಿ ಸೀತಾರಾಮ ಶೆಟ್ಟಿ ಅವರನ್ನು ನೆನಪಿಸಿಕೊಂಡ ವೀರಪ್ಪ ಮೊಯಿಲಿ ಅವರು ಸಹಪಾಠಿ ಕೃಷ್ಣಮೂರ್ತಿ ಭಟ್, ಅವಿನಾಶ್, ವಿಮಲ್ ಕುಮಾರ್, ಪೌಲ್ ವಗರ್ಸ್,  ಮುಂಬೈ ದೇವಾಡಿಗರ ಸಂಘದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಕೆ.ಎಂ. ನಾಗರಾಜ್ ಅವರನ್ನು ಗೌರವಿಸಿದರು. 

ಮೈಸೂರಿನ ಸಾಹಿತಿ ಸಂಶೋಧಕ, ಡಾ. ಕಬ್ಬಿನಾಲೆ ವಸಂತ ಭಾರದ್ವಜ, ಸಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿದರ್ಶಕ ನಿತಿನ್ಷಾ, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಬೆಂಗಳೂರಿನ ಕೆ.ಎಂ. ನಾಗರಾಜ್ ಉಪಸ್ಥಿತರಿದ್ದರು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಸ್ವಾಗತಿಸಿದರು. ಮೂಡುಬಿದಿರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕೃತಿ ಲೋಕಾರ್ಪಣೆ, ೮೫ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಡಾ. ಮೊಯಿಲಿ ಅವರನ್ನು ಭಟ್ಟಾರಕ ಸ್ವಾಮೀಜಿ ಸಹಿತ ಅತಿಥಿ, ಗಣ್ಯರು, ಆಮಂತ್ರಿತರು, ಅಭಿಮಾನಿಗಳು  ಶಾಲು, ಹಾರ, ಫಲ ಪುಷ್ಪ ಸ್ಮರಣಿಕೆಗಳೊಂದಿಗೆ ಗೌರವಿಸಿ ಅಭಿನಂದಿಸಿದರು.

ಮೂಡುಬಿದಿರೆಯ ಜನತೆಗೆ ವೀರಪ್ಪ ಮೊಯಿಲಿ ಅವರ ಋಣವಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಸಮೂಹದಲ್ಲಿ ಆರಂಭಿಸಲಾಗಿರುವ ಆಳ್ವಾಸ್ ಕಾನೂನು ಕಾಲೇಜಿನ ಹೊಸ ಕಟ್ಟಡಕ್ಕೆ ಡಾ. ಎಂ. ವೀರಪ್ಪ ಮೊಯಿಲಿ ಅವರ ಹೆಸರು ಇಡಲಾಗುವುದು. ಮುಂದೆ ವೀರಪ್ಪ ಮೊಯಿಲಿ ಅವರ ೯೦ನೇ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಹುಟ್ಟೂರು ಮೂಡುಬಿದಿರೆಯಲ್ಲಿ ಹಮ್ಮಿಕೊಳ್ಳುವ ಆಸೆ ನಮ್ಮದು ಎಂದು ಡಾ. ಮೋಹನ ಆಳ್ವ ಸೇರಿದವರ ಕರತಾಡನದ ನಡುವೆ ಘೋಷಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article