
ಶ್ರೀ ಕ್ಷೇತ್ರ ಪುತ್ತಿಗೆ ಬ್ರಹ್ಮಕಲಶೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ
ಮೂಡುಬಿದಿರೆ: 'ಪುತ್ತೆ' ಎಂಬ ಪುರಾತನ ಹೆಸರಿನಿಂದ ಪರಿಚಿತವಾಗಿರುವ, ಶಿಲಾಮಯವಾಗಿ ಪುನರ್‌ನಿರ್ಮಾಣಗೊಂಡಿರುವ ಶ್ರೀ ಕ್ಷೇತ್ರ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮ ಕಲಶಾಭಿಷೇಕದ ಆಮಂತ್ರಣ ಪತ್ರಿಕೆಯನ್ನು ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಭಾನುವಾರ ಬಿಡುಗಡೆಗೊಳಿಸಿದರು.
ನಂತರ ಅನ್ನದಾನ ನಿಧಿ ಸಮರ್ಪಣೆಗೆ ಚಾಲನೆ ನೀಡಿ ಮಾತನಾಡಿ ದೇವರಿಗೆ ಮಂದಿರ ಬೇಕಿಲ್ಲ, ಭಕ್ತರಾಗಿ ನಾವೆಲ್ಲ ಒಂದಾಗಿರಲು ದೇವತಾ ಮಂದಿರ ಬೇಕು. ದೇವಾಲಯ ಬಿಂಬ, ನಾವು ಪ್ರತಿಬಿಂಬ; ಬಿಂಬ ಪರಿಶುದ್ಧವಾಗಿದ್ದಾಗ ನಾವೂ ಸುಂದರವಾಗಿ ಕಾಣಲು ಸಾಧ್ಯ.ಅದಕ್ಕಾಗಿ ನಮ್ಮ ದೇಗುಲಗಳನ್ನು ಭೌತಿಕವಾಗಿಯೂ ದೈವಿಕವಾಗಿಯೂ ಸುಂದರವಾಗಿರಿಸಲು ಶ್ರದ್ಧಾಪೂರ್ವಕ ತೊಡಗಿಸಿಕೊಳ್ಳಬೇಕಾಗಿದೆ ಎಂದು ನುಡಿದರು.
ಶಂಕುಸ್ಥಾಪನೆಯ ಸಂದರ್ಭ 11,11,111 ರೂ. ಕಾಣಿಕೆ ಸಲ್ಲಿಸಿದ್ದ ಸ್ವಾಮೀಜಿಯಯವರು ಅದನ್ನು 16 ಲಕ್ಷಕ್ಕೇರಿಸಿ ಸಮರ್ಪಿಸುವುದಾಗಿ ಪ್ರಕಟಿಸಿದರು.
ಬ್ರಹ್ಮ ಕಲಶ ಸಮಿತಿ ಗೌರವಾಧ್ಯಕ್ಷ ,ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಬ್ರಹ್ಮಕಲಶಕ್ಕೂ ಮುನ್ನ ದೇಗುಲದ ಪಶ್ಚಿಮ ಭಾಗದಲ್ಲಿರುವ ಕಿರು ಸೇತುವೆಯನ್ನು ನೇರವಾಗಿ ನಿರ್ಮಿಸುವ ಜತೆಗೆ ಇಲ್ಲಿನ ರಸ್ತೆಗಳನ್ನು ಅಗಲಗೊಳಿಸುವ ಕಾಮಗಾರಿಯನ್ನು ತುರ್ತಾಗಿ ನಡೆಸಲಾಗುವುದು ಎಂದರು.
ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಚೌಟರ ಅರಮನೆ ಕುಲದೀಪ ಎಂ. ಅಧ್ಯಕ್ಷತೆ ವಹಿಸಿ, ಸ್ವಾಗತಿಸಿ ಪ್ರಸ್ತಾವನೆಗೈದು, ಭರದಿಂದ ಸಾಗುತ್ತಿರುವ ಜೀರ್ಣೋದ್ಧಾರದೊಂದಿಗೆ ಸ್ವಯಂಪ್ರೇರಿತರಾಗಿ ಸ್ವಯಂಸೇವಕರ ದಂಡೇ ಬರುತ್ತಿದ್ದು ಫೆ.28 ರಿಂದ ಮಾ.7ರವರೆಗೆ ನಡೆಯುವ ಬ್ರಹ್ಮಕಲಶೋತ್ಸವಕ್ಕೂ ಇದೇ ರೀತಿಯ ಸಹಕಾರವನ್ನು ಸರ್ವ ಭಕ್ತಾದಿಗಳು ನೀಡಬೇಕಾಗಿ ವಿನಂತಿಸಿದರು.
ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ, ಕೋಶಾಧಿಕಾರಿ ಕೆ.ಶ್ರೀಪತಿ ಭಟ್, ಪ್ರಧಾನ ಅರ್ಚಕ ಅಡಿಗಳ್ ಪಿ. ಅನಂತ ಕೃಷ್ಣ ಭಟ್, ಜತೆ ಕಾರ್ಯದರ್ಶಿ ವಿದ್ಯಾ ರಮೇಶ ಭಟ್ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಪುತ್ತಿಗೆಗುತ್ತು ನೀಲೇಶ್ ಶೆಟ್ಟಿ, ದ.ಕ. ಹಾಲು ಒಕ್ಕೂಟದ ಆಧ್ಯಕ್ಷ ಸುಚರಿತ ಶೆಟ್ಟಿ, ಅದಮಾರು ಸ್ವಾಮೀಜಿಯವರ ಪೂರ್ವಾಶ್ರಮದ ಸಹೋದರ ಇನ್ನ ಈಶ್ವರ ಮುಚ್ಚಿಂತಾಯ, ಹಿರಿಯರಾದ ಡಾ. ಪದ್ಮನಾಭ ಉಡುಪ, ಎಂಸಿಎಸ್ ಸೊಸೈಟಿ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಎಚ್. ಧನಕೀರ್ತಿ ಬಲಿಪ, ಕೊಡಿಪಾಡಿ ಅಶೋಕ್ ಹೆಗ್ಡೆ, ಜಿ. ಉಮೇಶ್ ಪೈ ಸಹಿತ ಪ್ರಮುಖರಿದ್ದರು.
ಡಾ. ಧನಂಜಯ ಕುಂಬ್ಳೆ ಕಾಯ೯ಕ್ರಮ ನಿರೂಪಿಸಿದರು.