
ಸಾಯಿ ಮಾನಾ೯ಡ್ ಸೇವಾ ಸಂಘದಿಂದ ಚಿಕಿತ್ಸೆಗೆ ನೆರವು
Monday, January 20, 2025
ಮೂಡುಬಿದಿರೆ: ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್( ರಿ.) ಅಮನಬೆಟ್ಟು, ಪಡುಮಾರ್ನಾಡ್ ಇದರ 47ನೇ ಸೇವಾ ಯೋಜನೆಯ ನೆರವನ್ನು ಸುಭಾಷ್ ನಗರದ ವಿನಾಯಕ ಪ್ರಭು ಅವರ ಚಿಕಿತ್ಸೆಗೆ ನೀಡಿ ಸ್ಪಂದಿಸಿದೆ.
ತಾಲೂಕಿನ ಕೋಟೆಬಾಗಿಲು ಪರಿಸರದ ಸುಭಾಸ್ ನಗರದ ವಿನಾಯಕ್ ಪ್ರಭು ಅವರು ಕಳೆದ ಕೆಲವು ಸಮಯದಿಂದ ಅರೋಗ್ಯದ ಸಮಸ್ಯೆಗೆ ತುತ್ತಾಗಿದ್ದು ಅವರ ಬಲಗೈ ಮತ್ತು ಬಲಗಾಲು ಸ್ವಾಧೀನ ಕಳೆದುಕೊಂಡು ಮಾತನಾಡಲು ವೆನ್ಲಾಕ್ ಆಸ್ಪತ್ರೆ ಗೆ ದಾಖಲಿಸಿ 10ದಿನ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು ಆದರಿಂದ ಏನೂ ಗುಣಮುಖವಾಗದೆ ಇರುವುದರಿಂದ ಅವರಿಗೆ ಉದ್ಯಾವರದಲ್ಲಿ ಹೊಮಿಯೋಪಥಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಇವರು 17ವರ್ಷಗಳ ಕಾಲ ಮೂಡುಬಿದಿರೆ ಹನುಮಾನ್ ದೇವಸ್ಥಾನದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇವರ ಮಗ ಚಿಕಿತ್ಸೆಗಾಗಿ ಖರ್ಚು ಮಾಡುತ್ತಿದ್ದು, ಆದರೆ ಅವರಿಗೂ ಇತ್ತೀಚೆಗೆ ವಾಹನ ಅಪಘಾತವಾಗಿ 6ತಿಂಗಳಿನಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದಾರೆ.
ಇವರ ಮನೆಯಲ್ಲಿ ಜೀವನೋಪಾಯಕ್ಕೆ ಯಾವುದೇ ಆದಾಯದ ಮೂಲವಿಲ್ಲದೇ ಮನೆಯ ದೈನಂದಿನ ಖರ್ಚು ಹಾಗೂ ಆಸ್ಪತ್ರೆಯ ಖರ್ಚು ಬರಿಸಲು ಕಷ್ಟ ಸಾಧ್ಯವಾಗಿರುವುದರಿಂದ ಇವರ ಕಷ್ಟಕ್ಕೆ ಸಾಯಿ ಮಾನಾ೯ಡ್ ತಂಡವು ಸ್ಪಂದಿಸಿ ಮಾನವೀಯತೆ ಮೆರೆದಿದೆ.