
ಅಡ್ಡ ಬಂದ ನಾಯಿ;ಆಟೋ ಪಲ್ಟಿ: ಚಾಲಕ ಗಂಭೀರ
Wednesday, January 1, 2025
ಮುಲ್ಕಿ: ಕಿನ್ನಿಗೋಳಿ ಉಲ್ಲಂಜೆ ಹೆದ್ದಾರಿಯ ಮೆನ್ನಬೆಟ್ಟು ಹಾಲು ಉತ್ಪಾದಕರ ಸಂಘದ ಬಳಿ ನಾಯಿ ಅಡ್ಡ ಬಂದು ಆಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಆಟೋ ಚಾಲಕ ಗಾಯಗೊಂಡ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಗಾಯಗೊಂಡ ಆಟೋ ಚಾಲಕನನ್ನು ಕಟೀಲು ಮಲ್ಲಿಗೆಯಂಗಡಿ ಬಳಿಯ ನಿವಾಸಿ ಕಟೀಲು ಮೇಳದ ಕಲಾವಿದಆನಂದ್ (40) ಎಂದು ಗುರುತಿಸಲಾಗಿದೆ.
ಗಾಯಾಳು ಆನಂದ್ ಆಟೋದಲ್ಲಿ ಕಿನ್ನಿಗೋಳಿಯಿಂದ ಕಟೀಲು ಕಡೆಗೆ ಹೋಗುತ್ತಿದ್ದು ಮೆನ್ನಬೆಟ್ಟು ಪಂಚಾಯತ್ ಬಳಿ ನಾಯಿ ಅಡ್ಡ ಬಂದಿದೆ.
ಈ ಸಂದರ್ಭ ನಾಯಿ ಜೊತೆ ಅಪಘಾತ ತಪ್ಪಿಸಲು ಆಟೋ ಚಾಲಕ ಯತ್ನ ನಡೆಸಿದಾಗ ಆಟೋ ಪಲ್ಟಿಯಾಗಿದ್ದು ಸಿನಿಮೀಯ ಮಾದರಿಯಲ್ಲಿ ಸಮೀಪದ ಪೊದೆಯೊಳಗೆ ಆಟೋ ಬಿದ್ದಿದೆ.
ಆಟೋ ಪಲ್ಟಿಯಾದ ರಭಸಕ್ಕೆ, ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದಿಂದ ಆಟೋಗೆ ಸಂಪೂರ್ಣ ಹಾನಿಯಾಗಿದೆ.
ಈ ಭಾಗದಲ್ಲಿ ಬೀದಿನಾಯಿಗಳ ಕಾಟ ವಿಪರೀತವಾಗಿದ್ದು ದಿನದ ಹಿಂದೆ ರಾತ್ರಿ ಆಟೋ ಅಪಘಾತ ಸಂಭವಿಸಿತ್ತು. ಕೂಡಲೇ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಬೀದಿ ನಾಯಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.