
ಯಕ್ಷಗಾನ ಕಲಾವಿದನಿಗೆ ಅಮಾನುಷ ಹಲ್ಲೆ: ಖಾಲಿ ಬಾಂಡ್ ಪೇಪರ್ಗೆ ಬಲಾತ್ಕಾರದಿಂದ ಸಹಿ ಪಡೆದ ಆರೋಪಿಗಳು
Friday, January 24, 2025
ಪಡುಬಿದ್ರಿ: ನಿಗದಿತ ಸಮಯಕ್ಕೆ ಸಾಲ ಮರು ಪಾವತಿಸಿಲ್ಲ ಎಂಬ ಕಾರಣಕ್ಕೆ ಸಾಲ ನೀಡಿದಾತ ಸಾಲ ಪಡೆದ ವ್ಯಕ್ತಿಗೆ ಅವ್ಯಾಚ್ಯ ಶಬ್ದದಿಂದ ನಿಂದಿಸಿ, ಅಮಾನುಷವಾಗಿ ಹಲ್ಲೆ ನಡೆಸಿ, ಖಾಲಿ ಬಾಂಡ್ ಪೇಪರ್ಗೆ ಬಲಾತ್ಕಾರದಿಂದ ಸಹಿ ಪಡೆದ ಘಟನೆ ಪಡುಬಿದ್ರಿಯಲ್ಲಿ ಘಟಿಸಿದೆ.
ಯಕ್ಷಗಾನ ಕಲಾವಿದ ನಿತಿನ್ರವರು ಆರೋಪಿ ಸಚಿನ್‌ರಿಂದ 2020ನೇ ಇಸವಿಯಲ್ಲಿ ಬಡ್ಡಿಗೆ ಸಾಲ ಪಡೆದುಕೊಂಡು ಅಸಲು ಹಾಗೂ ಬಡ್ಡಿ ಕಟ್ಟುತ್ತಾ ಬಂದಿದ್ದರು. ನಿಗದಿತ ಸಮಯದೊಳಗೆ ಸಾಲವನ್ನು ಕಟ್ಟುತ್ತಿಲ್ಲ ಎಂಬ ಕಾರಣದಿಂದ ಆರೋಪಿ ಸಚಿನ್ ಮತ್ತು ಆತನ ತಂದೆ ಕುಶಾಲಣ್ಣರವರು ಪಡುಬಿದ್ರಿಯ ಎಸ್.ಎಸ್ ಬಾರ್ ಬಳಿಯಿಂದ ಮನೆಯಲ್ಲಿ ಕುಳಿತು ಮಾತನಾಡುವ ಎಂದು ಹೇಳಿ ನಿತಿನ್‌ರನ್ನು ಕಾರಿನಲ್ಲಿ ಉದ್ಯಾವರದಲ್ಲಿ ಇರುವ ಆರೋಪಿಗಳ ಮನೆಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ.
ಆರೋಪಿಗಳ ಜೊತೆ ಪೈನಾನ್ಸ್‌ನವ ಎಂದು ಹೇಳಿಕೊಳ್ಳುವ ಇನ್ನೋರ್ವ ವ್ಯಕ್ತಿಯಿದ್ದು, ನಿತಿನ್‌ರನ್ನು ಕೂಡಿಹಾಕಿ ಅವ್ಯಾಚ್ಯ ಶಬ್ದದಿಂದ ನಿಂದಿಸಿ, ಹಲ್ಲೆ ನಡೆಸಿ, ಖಾಲಿ ಬಾಂಡ್ ಪೇಪರ್ಗೆ ಬಲಾತ್ಕಾರದಿಂದ ಸಹಿ ಪಡೆದು ಸಂಜೆ ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ನಿತಿನ್ ಅವರು ಅನಿವಾರ್ಯ ಕಾರಣದಿಂದ ಅಂದು ರಾತ್ರಿ ವೇಳೆ ಪುತ್ತೂರಿನಲ್ಲಿ ನಡೆಯುವ ಯಕ್ಷಗಾನಕ್ಕೆ ಹೋಗಿ ಅಲ್ಲಿ ವೇಷ ಧರಿಸಿ, ಜ.22 ರಂದು ಬೆಳಿಗ್ಗೆ ಮನೆಗೆ ಬಂದು, ನೋವು ಜಾಸ್ತಿಯಾದ್ದರಿಂದ ಪಡುಬಿದ್ರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.