
ಹಾಲಿ ಶಾಸಕರಿಂದ ರಾಜಕೀಯ ಪ್ರೇರಿತ ಹೇಳಿಕೆ: ಅಮ್ಮಬ್ಬ ಶೌಕತ್ ಆಲಿ
ಪುತ್ತೂರು: ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ಅಕ್ರಮ ಸಕ್ರಮ ಬೈಠಕ್ ನಲ್ಲಿ ಮಾಜಿ ಶಾಸಕರು ಟ್ಯಾಕ್ಸ್ ಕಲೆಕ್ಷನ್ ಮಾಡಿದ್ದಾರೆ. ಆದರೆ ಕೆಲವು ವಿಚಾರವನ್ನು ಮೈಕ್ ಮುಂದೆ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನು ಸರಿಯಾಗಿ ಸ್ಪಷ್ಠಪಡಿಸುವ ಕಾರ್ಯವನ್ನು ಶಾಸಕರು ಮಾಡಬೇಕು. ಮಾಜಿ ಶಾಸಕರ ಬಗ್ಗೆ ಸುಳ್ಳು ಆರೋಪ ಮಾಡುವ ಜತೆಗೆ ರಾಜಕೀಯ ಪ್ರೇರಿತವಾದ ಹೇಳಿಕೆಯನ್ನು ನೀಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಮ್ಮಬ್ಬ ಶೌಕತ್ ಆಲಿ ಹೇಳಿದರು.
ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಅಕ್ರಮ ಸಕ್ರಮ ಹೊಸ ಅರ್ಜಿ ಸಲ್ಲಿಗೆ 2023 ಮಾರ್ಚ್ 31ಕೊನೆಯ ದಿನವಾಗಿದ್ದು, 2023 ಮಾರ್ಚ್ 26ರಂದು ಮಾಜಿ ಶಾಸಕರ ಅಧ್ಯಕ್ಷತೆಯಲ್ಲಿ ಕೊನೆಯ ಬೈಠಕ್ ನಡೆದಿದೆ. ಶಕುಂತಳಾ ಟಿ. ಶೆಟ್ಟಿ ಹಾಗೂ ಸಂಜೀವ ಮಠಂದೂರು ಇದೇ ಊರಿನವರಾಗಿದ್ದು, 94ಸಿ., 94ಸಿಸಿ, ಮತ್ತು ಅಕ್ರಮ ಸಕ್ರಮ ಕಡತಗಳನ್ನು ವಿಲೇವಾರಿ ಮಾಡಿದ ದಾಖಲೆಗಳಿವೆ. ಮಾಜಿ ಶಾಸಕರ ರಾಜಕೀಯ ಜೀವನದ ಬಗ್ಗೆ 35 ವರ್ಷಗಳಿಂದ ಹಿರೇಬಂಡಾಡಿಯ ಜನರು ತಿಳಿದಿದ್ದು, ನೀವು ಪ್ರಮಾಣಪತ್ರ ನೀಡುವ ಅಗತ್ಯವಿಲ್ಲ. ಅಕ್ರಮಸಕ್ರಮ ಕಡತಗಳನ್ನು ಅಧಿಕಾರಿಗಳು ಸಿದ್ದಪಡಿಸಿದ ಬಳಿಕ ಶಾಸಕರ ಕಛೇರಿಗೆ ತೆರಳಬೇಕಾದ ಅವಶ್ಯಕತೆಯನ್ನು ಸ್ಪಷ್ಟಪಡಿಸಬೇಕಾಗಿದೆ. ಅಕ್ರಮಸಕ್ರಮ ವಿಚಾರದ ಬಗ್ಗೆ ಮಾತನಾಡುವ ಮೊದಲು ಶಾಸಕರು ಇನ್ನಷ್ಟು ಅಧ್ಯಯನ ನಡೆಸಬೇಕು ಎಂದು ತಿಳಿಸಿದ್ದಾರೆ.
ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಶಾಸಕರು ಉಪ್ಪಿನಂಗಡಿಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿಯನ್ನು ದೂರವಾಣಿ ಮೂಲಕ ಪ್ರಶ್ನಿಸುವ ಸಂದರ್ಭ ತಾನು ನಿಮ್ಮ ಅಭಿಮಾನಿ ಎನ್ನುತ್ತಿದ್ದಂತೆ ಧ್ವನಿಯಲ್ಲಿ ಬದಲಾವಣೆಯಾಗಿದೆ. ಕೋಡಿಂಬಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬೈಠಕ್ ನಲ್ಲಿ ಮಾಡಿದ ಆರೋಪಗಳ ಬಗ್ಗೆ ವಿಮರ್ಶೆ ಮಾಡಬೇಕು. ಒಂದೂವರೆ ವರ್ಷಗಳಿಂದ ಅಭಿವೃದ್ಧಿ ವಿಚಾರದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರೇ ಸಾಮಾಜಿಕ ಮಾಧ್ಯಮಗಳ ಮೂಲಕ ಮಾಡುತ್ತಿರುವ ಆರೋಪಗಳನ್ನು ಮರೆ ಮಾಚಲು ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಪಂಚಾಯಿತಿ ಅಧ್ಯಕ್ಷ ಸದಾನಂದ ಶೆಟ್ಟಿ, ಸದಸ್ಯ ನಿತಿನ್, ದಯಾನಂದ ಸರೋಳಿ ಉಪಸ್ಥಿತರಿದ್ದರು.
ಪ್ರಶ್ನೆಗೆ ಕಂಗಾಲು..!:
ಹಿಂದಿನ ಶಾಸಕರ ಅವಧಿಯಲ್ಲಿ ಎಷ್ಟು ಕಡತ ವಿಲೇವಾರಿಯಾಗಿದೆ. ಎಷ್ಟು ಕಡತ ಉಳಿದುಕೊಂಡಿದೆ ಎಂಬ ಮಾಹಿತಿಯನ್ನು ಸುದ್ದಿಗೋಷ್ಠಿ ಕೇಳಿದ ಸಂದರ್ಭ ಯಾವುದೇ ದಾಖಲೆಯಿಲ್ಲದೆ ಬಂದಿದ್ದಲ್ಲದೇ ಮಾಹಿತಿ ನೀಡಲು ಸಾಧ್ಯವಾಗದೇ ಕಂಗಾಲಾದರು. ಟ್ಯಾಕ್ಸ್ ಕಲೆಕ್ಷನ್ ಎಂದರೆ ಸರ್ಕಾರಕ್ಕೆ ಕಟ್ಟುವ ತೆರಿಗೆಯ ವಿಚಾರ ಆಗಿರಬಹುದೇ ಎಂಬುದನ್ನು ಕೇಳಿದಾಗಲೂ ಅದನ್ನು ಶಾಸಕರು ಉತ್ತರಿಸಬೇಕೆಂದು ಜಾರಿಕೊಂಡರು.