
ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಎನ್‌ಎಸ್‌ಎಸ್ ಘಟಕಕ್ಕೆ ತಾಲ್ಲೂಕು ಅತ್ಯುತ್ತಮ ಎನ್‌ಎಸ್‌ಎಸ್ ಘಟಕ ಪ್ರಶಸ್ತಿ
Thursday, January 16, 2025
ಪುತ್ತೂರು: ಪುತ್ತೂರು ತಾಲ್ಲೂಕು ಯುವಜನ ಒಕ್ಕೂಟವು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ತಾಲ್ಲೂಕಿನಲ್ಲಿ ಅತ್ಯುತ್ತಮ ಸಾಧನೆಗೈದ ಕಾಲೇಜಿನ ಎನ್‌ಎಸ್‌ಎಸ್ ಘಟಕಗಳಿಗೆ ನೀಡುವ 2025ನೇ ಸಾಲಿನ ತಾಲ್ಲೂಕಿನ ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನೆ ಘಟಕ ಪ್ರಶಸ್ತಿಗೆ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಎನ್‌ಎಸ್‌ಎಸ್ ಘಟಕವು ಭಾಜನವಾಗಿದೆ.
ಪುತ್ತೂರಿನ ಆಸ್ಮಿ ಕಂಫರ್ಟ್‌ನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು, ರೋಟರಿ ಕ್ಲಬ್ ಸೆಂಟ್ರಲ್ ಪುತ್ತೂರು, ತಾಲ್ಲೂಕು ಯುವಜನ ಒಕ್ಕೂಟ (ರಿ) ಪುತ್ತೂರು ಸಹಯೋಗದೊಂದಿಗೆ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ತಾಲೂಕು ಯುವ ಪ್ರಶಸ್ತಿ ಪ್ರದಾನ-2025 ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ಡಾ. ವಿಜಯಕುಮಾರ್ ಎಂ., ಕಾಲೇಜಿನ ಉಪನ್ಯಾಸಕ ಹಾಗೂ ನಿಕಟಪೂರ್ವ ಎನ್‌ಎಸ್‌ಎಸ್ ಅಧಿಕಾರಿ ವಾಸುದೇವ ಕೆ., ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿಗಳಾದ ಪುಷ್ಪ ಮತ್ತು ಡಾ. ಚಂದ್ರಶೇಖರ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿ ನಾಯಕರು ಜೊತೆಗಿದ್ದರು.
ಕಾಲೇಜಿನ ಎನ್‌ಎಸ್‌ಎಸ್ ಘಟಕವು ಪ್ರಶಸ್ತಿ ಪಡೆಯಲು ಕಾರಣರಾದ ನಿಕಟಪೂರ್ವ ಎನ್‌ಎಸ್‌ಎಸ್ ಅಧಿಕಾರಿ ವಾಸುದೇವ ಕೆ. ಹಾಗೂ ಪುಷ್ಪ ಹಾಗೂ ಇಡೀ ಘಟಕವನ್ನು ಕಾಲೇಜಿನ ಪ್ರಾಂಶುಪಾಲ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ಅಭಿನಂದಿಸಿದರು.