ಸಂತ ಫಿಲೋಮಿನಾ ಕಾಲೇಜಿನಲ್ಲಿ ಹುತಾತ್ಮರ ದಿನಾಚರಣೆ

ಸಂತ ಫಿಲೋಮಿನಾ ಕಾಲೇಜಿನಲ್ಲಿ ಹುತಾತ್ಮರ ದಿನಾಚರಣೆ


ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಸಭಾಭವನದಲ್ಲಿ ಇಂದು ಹುತಾತ್ಮರ ದಿನವನ್ನು ಆಚರಿಸಲಾಯಿತು.  

ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ಹಾಗೂ ದೇಶಕ್ಕಾಗಿ ಹುತಾತ್ಮರಾದವರೆಲ್ಲರಿಗೂ ಗೌರವ ಸೂಚಿಸುವ ಸಲುವಾಗಿ ಒಂದು ನಿಮಿಷದ ಮೌನ ಪ್ರಾರ್ಥನೆ ಮೂಲಕ ಗೌರವವನ್ನು ಸಲ್ಲಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್‌ ಮೊಂತೇರೊರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, "ಈ ದಿನ ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಅಸಂಖ್ಯಾತ ಧೈರ್ಯಶಾಲಿಗಳಿಗೆ ಗೌರವ ಸಲ್ಲಿಸಿದ್ದೇವೆ.  ಮಾತ್ರವಲ್ಲದೆ ಈ ದಿನವು ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಹುತಾತ್ಮರಾದ ದಿನ. ಗಾಂಧೀಜಿಯವರು ಕೇವಲ ನಾಯಕರಲ್ಲ, ಅವರು ಸತ್ಯ, ಅಹಿಂಸೆ ಮತ್ತು ನಿಸ್ವಾರ್ಥ ಸೇವೆಯ ಮೂರ್ತರೂಪವಾಗಿದ್ದರು. ಇಂದು ನಾವು ಮಹಾತ್ಮಾ ಗಾಂಧೀಜಿ ಹಾಗೂ ದೇಶಕ್ಕಾಗಿ ಹುತಾತ್ಮರಾದ ವೀರರಿಗೆ  ನಮನ ಸಲ್ಲಿಸುವಾಗ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಅವರು ಪ್ರತಿಪಾದಿಸಿದ ಆದರ್ಶಗಳನ್ನು ನಾವು ಎತ್ತಿಹಿಡಿದು ಶಾಂತಿ, ಏಕತೆ ಮತ್ತು ನ್ಯಾಯಯುತವಾದ ಜೀವನವನ್ನು ನಡೆಸಬೇಕಾಗಿದೆ ಎಂದು ಹೇಳಿದರು.


ಮಾತಿನಲ್ಲಿ ಸತ್ಯವನ್ನು, ನಮ್ಮ ಕಾರ್ಯಗಳಲ್ಲಿ ಅಹಿಂಸೆಯನ್ನು ಮತ್ತು ಜೀವನದಲ್ಲಿ ಸಮಗ್ರತೆಯನ್ನು ಎತ್ತಿಹಿಡಿಯಲು ಪ್ರತಿಜ್ಞೆ ಮಾಡೋಣ. ಆರ್ಥಿಕತೆ ಮತ್ತು ತಂತ್ರಜ್ಞಾನದಲ್ಲಿ ಮಾತ್ರವಲ್ಲದೆ   ಮಾನವೀಯ ಮೌಲ್ಯಗಳಿಂದ ಶ್ರೀಮಂತವಾಗಿರುವ ಭಾರತದ ನಿರ್ಮಾಣ ಮಾಡೋಣ" ಎಂದು ಹೇಳಿ ಹುತಾತ್ಮರಿಗೆ ಗೌರವ ನಮನಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯ ಕುಮಾರ್‌ ಮೊಳೆಯಾರ್‌ ಅವರು “ಗಾಂಧೀಜಿವಯರ ಬೋಧನೆಗಳು ಸಾರ್ವಕಾಲಿಕ ಸತ್ಯಗಳಾಗಿವೆ. ಅವರ ಸರಳ ಜೀವನ ನಮ್ಮೆಲ್ಲರಿಗೂ ಮಾದರಿಯಾಗಿದೆ. ದೇಶಕ್ಕಾಗಿ   ಬಲಿದಾನ ಮಾಡಿದ ಸಾವಿರಾರು ಮಾಹಾತ್ಮರನ್ನು ಸ್ಮರಿಸಿ ಅವರಿಗೆ ಗೌರವನಮನಗಳನ್ನು ಈ ಮೂಲಕ ಸಲ್ಲಿಸುತ್ತಿದ್ದೇವೆ. ಶಾಂತಿ, ಸತ್ಯ, ಅಹಿಂಸೆಗಳಂತಹ ಮಾನವೀಯ ಮೌಲ್ಯಗಳು ನಶಿಸಿಹೋಗುತ್ತಿರುವ  ಇಂದಿನ ಜಗತ್ತಿನಲ್ಲಿ, ಹುತಾತ್ಮರ ದಿನದ ಸಂದೇಶವು ಎಂದಿಗಿಂತಲೂ ಹೆಚ್ಚು ಪ್ರಸ್ತುತವೆನಿಸುತ್ತದೆ. ವಿಭಜನೆಯ ವಿರುದ್ಧ ಒಗ್ಗಟ್ಟಾಗಿ ನಿಲ್ಲಲು, ಶೋಷಣೆಗೆ ಒಳಗಾದವರ  ಪರವಾಗಿ ಹೋರಾಡಲು ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನ ನಡೆಸಲು ಎಲ್ಲರೂ ಶ್ರಮಿಸಬೇಕಾಗಿದೆ” ಎಂದು ಹೇಳಿದರು.


ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀರಾಗ ಹಾಗೂ ವಿದ್ಯಾರ್ಥಿನಿ ಶ್ರದ್ಧಾ ಬಿ. ಭಟ್‌ ಸರ್ವಧರ್ಮ ಪ್ರಾರ್ಥನೆ ಹಾಗೂ ದೇಶ ಭಕ್ತಿಗೀತೆಗಳನ್ನು ಹಾಡಿದರು. ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ಸಂಯೋಜಕಿ ಶ್ರೀಮಣಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರತೀಕ್ಷಾ ವಂದಿಸಿದರು. 

ಕಾಲೇಜಿನ ಪರೀಕ್ಷಾಂಗ ಕುಲಸಚಿವ ವಿನಯಚಂದ್ರ, ಉಪಕುಲಸಚಿವ ಅಭಿಷೇಕ್‌ ಸುವರ್ಣ, ಕ್ಯಾಪ್ಟನ್‌ ಜಾನ್ಸನ್‌ ಡೇವಿಡ್‌ ಸಿಕ್ವೆರಾ, ಶೈಕ್ಷಣಿಕ ಉಪಕುಲಸಚಿವ ವಿಪಿನ್‌ ನಾಯ್ಕ್‌,   ಹಾಗೂ ಸ್ನಾತಕೋತ್ತರ ವಿಭಾಗಗಳ ಸಂಯೋಜಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  

 

 

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article