
ನೆಟ್ಟಣ: ದೂರು ಅರ್ಜಿ ಸಮಿತಿ ಸದಸ್ಯ ಸುರೇಶ್ ಕುಮಾರ್ ಭೇಟಿ: ಸಂಪರ್ಕ ಸೇತುವೆ, ಸಂಪರ್ಕ ರಸ್ತೆ ಸ್ಥಳ ಪರಿಶೀಲನೆ
ಸುಬ್ರಹ್ಮಣ್ಯ: ರಾಜಾಜಿನಗರ ಶಾಸಕ, ಮಾಜಿ ಶಿಕ್ಷಣ ಸಚಿವ ಹಾಗೂ ದೂರು ಅರ್ಜಿ ಸಮಿತಿ ಸದಸ್ಯ ಸುರೇಶ್ ಕುಮಾರ್ ಅವರು ಕಡಬ ತಾಲೂಕಿನ ನೆಟ್ಟಣಕ್ಕೆ ಭೇಟಿ ನೀಡಿ ಸ್ಥಳೀಯ ಸಂಪರ್ಕ ಸೇತುವೆ, ಸಂಪರ್ಕ ರಸ್ತೆಗಳನ್ನು ಪರಿಶೀಲನೆ ನಡೆಸಿದರು.
ಬಿಳಿನೆಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಟ್ಟಣದ ನೆಟ್ಟಣ, ಮುಂಡಡ್ಕ, ವಾಟೇಕಜೆ, ಐತ್ತೂರು ಸಂಪರ್ಕ ರಸ್ತೆಗೆ ನಿರ್ಮಾಣ ಆಗಲಿರುವ ಸ್ಥಳ ಪರಿಶೀಲಿಸಿದರು. ಕೊಂಬಾರು ಗ್ರಾಮದ ಕಾಪಾರು ಸಂಪರ್ಕಿಸುವ ರಸ್ತೆಯ ದೊಡ್ಡಡ್ಕ ಎಂಬಲ್ಲಿ ಸೇತುವೆ ರಚನೆಯಾಗುವ ಸ್ಥಳವನ್ನೂ ಪರಿಶೀಲಿಸಿದರು.
ಇಲ್ಲಿನ ಸಮಸ್ಯೆ ಬಗ್ಗೆ ಹಾಗೂ ಬೇಡಿಕೆ ಬಗ್ಗೆ ರಾಜ್ಯ ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ನಿರ್ದೇಶಕರಾದ ವಿನೀಶ್ ಕುಮಾರ್ ಹಾಗೂ ರಾಮಕೃಷ್ಣ ಹೊಳ್ಳಾರು ಅವರು ದೂರು ಅರ್ಜಿ ಸಮಿತಿಯ ಸದಸ್ಯ ಸುರೇಶ್ ಕುಮಾರ್ ಅವರ ಗಮನಕ್ಕೆ ತಂದಿದ್ದರು. ಬಳಿಕ ಕೆಲ ತಿಂಗಳ ಹಿಂದೆ ಸುರೇಶ್ ಕುಮಾರ್ ಇಲ್ಲಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಶಾಲಾ ಮಕ್ಕಳು ಹಾಗೂ ನಾಗರಿಕರೊಂದಿಗೆ ಮಾತುಕತೆ ನಡೆಸಿದ್ದರು. ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು.
ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ರಾಜ್ಯ ಸಂಚಾಲಕ ಮೊಯ್ದಿನ್ ಕುಟ್ಟಿ, ರಾಜ್ಯ ನಿರ್ದೇಶಕ ಉಸ್ಮಾನ್ ನೆಕ್ಕಿಲು, ರಾಮಕೃಷ್ಣ ಹೊಳ್ಳಾರು, ಉಮ್ಮರ್ ಟೆಕ್ನಿಕ್, ವಿನೀಶ್ ಕುಮಾರ್, ಸಲಿಂ ಮಾಯಾಂಗಳ, ನವಾಜ್ ಪಲ್ಲತ್ತಾರು, ಅಶ್ರಫ್ ಕಲ್ಲೇರಿ, ಜಿಲ್ಲಾ ನಿರ್ದೇಶಕರಾದ ವೆಂಕಟರಮಣ ಪುಣಚ, ಸಲಿಕತ್ ಕೆಮ್ಮಾರ, ಪ್ರಮುಖರಾದ ಶ್ರೀಧರ ಗೌಡ ಕಾಪಾರು, ಮೊಹನ ಕಾಪಾರು, ವೆಂಕಟ್ರಮಣ ಕಾಪಾರು ಹಾಗೂ ಈ ಭಾಗದ ಸ್ಥಳೀಯರು, ಗ್ರಾಮಸ್ಥರು ಉಪಸ್ಥಿತರಿದ್ದರು.