
ಕುಕ್ಕೆ: ಕಿರುಷಷ್ಠಿ ವೈಭವದಲ್ಲಿ ಯೋಗ ಜಾಗೃತಿ ಮೂಡಿಸಿದ ಯೋಗ ನೃತ್ಯ
Monday, January 6, 2025
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಕಿರುಷಷ್ಠಿ ಸಾಂಸ್ಕೃತಿಕ ವೈಭವದ 4ನೇ ದಿನವಾದ ಆದಿತ್ಯವಾರ ವಿಶ್ವದಾಖಲೆ ಮಾಡಿದ ಯೋಗಪಟು ಗೌರಿತಾ ಕೆ.ಜಿ. ಅವರಿಂದ ಯೋಗ ನೃತ್ಯ ಪ್ರದರ್ಶಿತವಾಯಿತು.
ನೃತ್ಯದ ಮೂಲಕ ಯೋಗಾಸನವನ್ನು ಪ್ರದರ್ಶಿಸುವ ಮೂಲಕ ಯೋಗದಿಂದ ಆರೋಗ್ಯ ಎಂಬ ಜಾಗೃತಿಯನ್ನು ಮೂಡಿಸಲು ಪುಟಾಣಿ ಗೌರಿತಾ ಕೆ.ಜಿ. ಸಫಲರಾದರು.ಸುಮಾರು 30 ನಿಮಿಷಗಳ ಕಾಲ ಹದವಾದ ಹಿನ್ನೆಲೆ ಸಂಗೀತದ ನಾದದ ನಡುವೆ 120ಕ್ಕೂ ಆಸನಗಳನ್ನು ಪ್ರಸ್ತುತಪಡಿಸಿದರು.
ಕೈಯಲ್ಲಿ ದೀಪ ಹಿಡಿದು ದೀಪಭೂನಮನಾಸನ, ಹನುಮಾಸನ, ಲಘು ವಜ್ರಾಸನ, ಮತ್ಸ್ಯಾಸನ, ಗರುಡಾಸನವನ್ನು ಗೌರಿತಾ ಪ್ರದರ್ಶಿಸಿದರು. ನಂತರ ದೀಪ ಹಣೆಯ ಮೇಲಿಟ್ಟು ಸರ್ವಾಂಗಾಸನ, ಸರ್ವಾಂಗಾಸನದಲ್ಲಿ ಪದ್ಮಾಸನ, ಕರ್ಣಪೀರಾಸನ, ಪೂರ್ಣ ಭುಜಂಗಾಸನ, ದೀಪ ತಲೆಯ ಮೇಲಿಟ್ಟು ವೀರಭದ್ರಾಸನ, ಆಂಜನೇಯಾಸನ,ಪದ್ಮಾಸನ ಮಾಡಿದರು. ಕೊಡಪಾನದ ಮೇಲೆ ನಿಂತು ವೃಕ್ಷಾಸನ, ತ್ರಿವಿಕ್ರಮ ನಟರಾಜಾಸನ, ಉತ್ತಿತ ಹಸ್ತ ಪಾದಂಗುಷ್ಠಾಸನ, ಬಕಾಸನ, ಸ್ಕಂದಾಸನ, ಪದ್ಮಾಸನ, ನೆಲದ ಮೇಲೆ ವಾಲ್ಮೀಕಿಯಾಸನ, ನಟರಾಜಾಸನ, ಗಂಡಬೇರುಂಡಾಸನ, ಶಲಭ ಕೌಂಡಿಯಾಸನ, ಊರ್ಧ್ವ ಮುಖ ಟಿಟಿಬಾಸನ, ಯೋಗ ನಿದ್ರಾಸನ, ನೆಲದ ಮೇಲೆ ನಿಂತು ಓಂಕಾರಾಸನ, ಅಸ್ತವಕ್ರಾಸನ, ಪರಿವೃತ ಉಷ್ಠಾಸನ, ಬರುಡಾಸನ, ಕಾಕಾಸನ, ಭುಜಪೀಡಾಸನ, ತುಲಾಸನ ಸೇರಿದಂತೆ 100ಕ್ಕೂ ಅಧಿಕ ಆಸನಗಳನ್ನು ಪ್ರದರ್ಶಿಸಿದರು. ಯೋಗಗುರು ಶರತ್ ಮರ್ಗಿಲಡ್ಕ ನಿರ್ದೇಶನ ನೀಡಿದರು.
ಡಾ. ರಾಜೇಶ್ವರಿ, ನಿವೃತ್ತ ಮುಖ್ಯಗುರುಗಳಾದ ಮೇದಪ್ಪ ಗೌಡ ಮತ್ತು ಭುವನೇಶ್ವರಿ ಸಹಕರಿಸಿದರು.