
ಉಜಿರೆ ಎಸ್‌ಡಿಎಂನಲ್ಲಿ ರಾಜ್ಯ ಮಟ್ಟದ ‘ಬಿ ವೋಕ್ ಉತ್ಸವ-2025’
ಜ್ಞಾನದ ಜತೆಗೆ ಕೌಶಲ್ಯ ಕಲಿತುಕೊಳ್ಳಬೇಕಾದ ಅನಿವಾರ್ಯತೆಯಿದೆ: ಡಾ. ಸತೀಶ್ಚಂದ್ರ ಎಸ್.
ಉಜಿರೆ: ಬದಲಾಗುತ್ತಿರುವ ವೇಗದ ಕಾಲಮಾನಕ್ಕೆ ಶಿಕ್ಷಣ ಕ್ಷೇತ್ರವೂ ಹೊರತಾಗಿಲ್ಲ. ಶಿಕ್ಷಣ ಕ್ಷೇತ್ರಕ್ಕೆ ಶಕ್ತಿ ನೀಡಿ ಧನಾತ್ಮಕ ಹಾಗೂ ಗುಣಾತ್ಮಕವಾಗಿ ಪರಿಣಾಮಕಾರಿಯಾಗಲು ಸಂಸ್ಥೆಯಲ್ಲಿ ಬಿ ವೋಕ್ ಕೋರ್ಸ್ ಆರಂಭಿಸಲಾಗಿದೆ. ಜ್ಞಾನದ ಜತೆಗೆ ಪರಿಪಕ್ವತೆಯ ಕೌಶಲ್ಯ ಕಲಿತುಕೊಳ್ಳಬೇಕಾದ ಅನಿವಾರ್ಯತೆಯಿದೆ. ಎಲ್ಲ ಉದ್ಯೋಗ, ಸ್ವಉದ್ಯೋಗದಲ್ಲಿ ಕೌಶಲದಿಂದ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹೇಳಿದರು.
ಅವರು ಜ.2 ರಂದು ಉಜಿರೆ ಎಸ್‌ಡಿಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಎಸ್‌ಡಿಎಂ ಕಾಲೇಜಿನ ಬಿ ವೋಕ್ ವಿಭಾಗದ ವತಿಯಿಂದ ರಾಜ್ಯ ಮಟ್ಟದ ಪದವಿ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ‘ಬಿ ವೋಕ್ ಉತ್ಸವ-2025’ನ್ನು ಉದ್ಘಾಟಿಸಿ ಮಾತನಾಡಿದರು.
ಇದು ವಿದ್ಯಾರ್ಥಿಗಳ ಸೃಜನಾತ್ಮಕ ಪ್ರತಿಭೆಗಳನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆಯಾಗಿದ್ದು, ಶಿಕ್ಷಣದ ಜತೆಗೆ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅಪೂರ್ವ ಅವಕಾಶವಾಗಿದೆ ಎಂದು ಅಭಿನಂದಿಸಿದರು.
ಎಸ್‌ಡಿಎಂ ಪ.ಪೂ. ಕಾಲೇಜು ಪ್ರಾಚಾರ್ಯ ಪ್ರಮೋದ್ ಕುಮಾರ್ ವಿದ್ಯಾರ್ಥಿಗಳ ‘ವ್ಯಾಸಂಗಗಳ ಕಥೆಗಳು’ ಕಥಾ ಸಂಕಲನವನ್ನು ಬಿಡುಗಡೆಗೊಳಿಸಿ ಸಮಕಾಲೀನ ಸ್ಪರ್ಧಾಪ್ರಪಂಚದಲ್ಲಿ ಮುನ್ನುಗ್ಗಿದವನು ಯಶಸ್ವಿಯಾಗುತ್ತಾನೆ. ಶೈಕ್ಷಣಿಕ ಕ್ರಾಂತಿಯಿಂದ ನೂತನ ಶಿಕ್ಷಣ ನೀತಿಯಲ್ಲಿ ಕೌಶಲಗಳಿಗೆ ಆದ್ಯತೆ ಹಾಗೂ ಅವಕಾಶಗಳು ಅಗತ್ಯ. ಕೌಶಲ್ಯಾಧಾರಿತ ಶಿಕ್ಷಣದಿಂದ ಜೀವನದಲ್ಲಿ ವೈಫಲ್ಯ ಕಾಣಲು ಸಾಧ್ಯವಿಲ್ಲ. ಪ್ರತಿಯೊಬ್ಬನಲ್ಲೂ ಪ್ರತಿಭೆಯಿದ್ದು, ಅವಕಾಶಗಳು ಮುಕ್ತವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಕಾಲೇಜು ಪ್ರಾಂಶುಪಾಲ ಡಾ. ಬಿ.ಎ ಕುಮಾರ ಹೆಗ್ಡೆ ಮಾನಸಿಕವಾಗಿ ದೈಹಿಕವಾಗಿ, ಸ್ಪರ್ಧೆಗಳನ್ನು ಎದುರಿಸಿ ಪಡೆಯುವ ಅನುಭವ ಮುಂದಿನ ಬದುಕಿಗೆ ಉಪಯೋಗವಾಗುವುದು. ಸ್ಪರ್ಧೆಗಳಲ್ಲಿ ಬಹುಮಾನ ಗಳಿಸುವುದು ಮುಖ್ಯವಲ್ಲ. ಭಾಗವಹಿಸಿ ಅನುಭವ ಪಡುಯುವುದು ಮುಂದಿನ ಜೀವನಕ್ಕೆ ದಾರಿದೀಪವಾಗಬಲ್ಲುದು. ಮನೋಧರ್ಮ, ಕೌಶಲ್ಯ ಮತ್ತು ಅನುಭವ ಜ್ಞಾನ ನಮ್ಮ ಭವಿಷ್ಯವನ್ನು ರೂಪಿಸುತ್ತದೆ ಎಂದರು.
ಇದೆ ಸಂದರ್ಭದಲ್ಲಿ ಹಂಪಿ ವಿ.ವಿ.ಯಿಂದ ಪಿಎಚ್‌ಡಿ ಪಡೆದ ಉಪನ್ಯಾಸಕ ಸುವೀರ್ ಜೈನ್ ಅವರನ್ನು ವಿಭಾಗದ ಉಪನ್ಯಾಸಕ ವೃಂದ ಅಭಿನಂದಿಸಿದರು.
ಬಿ ವೋಕ್ ಉತ್ಸವ ಸಂಯೋಜಕ ಡಾ. ಸುವೀರ್ ಜೈನ್ ಸ್ವಾಗತಿಸಿ, ಪ್ರಸ್ತಾವಿಸಿ 80 ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಬಿ ವೋಕ್ ಕೋರ್ಸ್‌ನಲ್ಲಿ ಇಂದು ೫ನೇ ವರ್ಷದಲ್ಲಿ 390 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಪದವಿ ಹಾಗೂ ಪ.ಪೂ. ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಲು ಸ್ಪರ್ಧೆ ಹಾಗೂ ಮನರಂಜನೆಗಾಗಿ ಉತ್ಸವ ಆಯೋಜಿಸಲಾಗುತ್ತಿದ್ದು, ಬೇರೆ ಕಾಲೇಜಿನ ವಿದ್ಯಾರ್ಥಿಗಳೂ ಭಾಗವಹಿಸುತ್ತಿದ್ದಾರೆ ಎಂದರು.
ಡಿಜಿಟಲ್ ಮೀಡಿಯಾ ಮತ್ತು ಫಿಲಂ ಮೇಕಿಂಗ್ ವಿಭಾಗದ ಮಾಧವ ಹೊಳ್ಳ, ಅಶ್ವಿತಾ ಎಚ್.ಆರ್. ಮತ್ತು ಕುಸುಮ ಹಾಗು ವಿದ್ಯಾರ್ಥಿ ನಾಯಕರಾದ ಸೌರವ, ಯೋಗೀಶ್ ಮತ್ತು ಐಶ್ವರ್ಯ ಉಪಸ್ಥಿತರಿದ್ದರು.
ಅಶ್ವಿನಿ ಜೈನ್ ವರದಿ ಮಂಡಿಸಿದರು. ಅಶ್ವಿತಾ ಎಚ್.ಆರ್. ವಂದಿಸಿದರು.