ಅಪಮೃತ್ಯು: ಮಹಾ ಮೃತ್ಯುಂಜಯ ಹೋಮಕ್ಕೆ ಮೊರೆ ಹೋದ ಜನತೆ

ಅಪಮೃತ್ಯು: ಮಹಾ ಮೃತ್ಯುಂಜಯ ಹೋಮಕ್ಕೆ ಮೊರೆ ಹೋದ ಜನತೆ


ಉಳ್ಳಾಲ: ಉಳ್ಳಾಲ ಕುಂಪಲ ಗ್ರಾಮದಲ್ಲಿ ಸಾಲು ಸಾಲು ಅಕಾಲಿಕ ಮೃತ್ಯು. 2019ರಿಂದ ಇಲ್ಲಿಯ ಸುಮಾರು 50ಕ್ಕೂ ಹೆಚ್ಚು ಮಂದಿ ವಯಸಲ್ಲದ ವಯಸ್ಸಿಗೆ ಅಪಮೃತ್ಯುವಿಗೆ ಒಳಗಾಗಿದ್ದರು. ಹೆಚ್ಚಿನ ಮಂದಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದರೆ ಇನ್ನು ಕೆಲವರು ಅಪಘಾತ, ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಿ ಜೀವ ಕಳೆದುಕೊಂಡಿದ್ದರು. 

ಇದರಲ್ಲಿ ರೂಪದರ್ಶಿಯಾಗಿದ್ದ ಪ್ರೇಕ್ಷಾ ಎಂಬ ಯುವತಿ ನೇಣಿಗೆ ಕೊರಳೊಡ್ಡಿದ್ದರೆ, ಅಶ್ವಿನಿ ಬಂಗೇರ ಎಂಬ ಯುವತಿ ಗೃಹಪ್ರವೇಶವಾದ ಐದೇ ದಿನದಲ್ಲಿ ತನ್ನದೇ ನೂತನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದರಿಂದ ಕಂಗೆಟ್ಟ ಊರಿನ ಮಂದಿ ಕುಂಪಲದ ಆದಿಶಕ್ತಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ದೈವಜ್ಞರ ಮೂಲಕ ಪ್ರಶ್ನಾ ಚಿಂತನೆಯನ್ನಿಟ್ಟರು. ಕರಾವಳಿ, ಕೇರಳ ಭಾಗದಲ್ಲಿ ಸಾಕಷ್ಟು ಮಹತ್ವ ಪಡೆದುಕೊಂಡಿರುವ ಈ ಪ್ರಶ್ನಾ ಚಿಂತನೆಯಲ್ಲಿ ಕುಂಪಲ ಗ್ರಾಮದ ಜನತೆಯ ಸರಣಿ ಸಾವಿಗೆ ದೈವದ ಮುನಿಸೇ ಕಾರಣ ಎಂಬ ಸುಳಿವು ಸಿಕ್ಕಿತು. ಇದರ ಜೊತೆ ಗ್ರಾಮದ ಜನರ ಅಕಾಲಿಕ ಮರಣಕ್ಕೆ ತಡೆ ನೀಡಲು ಮಹಾ ಮೃತ್ಯುಂಜಯ ಯಾಗ ನಡೆಸುವಂತೆ ಸೂಚಿಸಲಾಗಿತ್ತು. ಅದರಂತೆ ಈ ಸಾವು ನೋವು ತಡೆಯಲು ಕುಂಪಲದಲ್ಲಿ ಮಹಾ ಮೃತ್ಯುಂಜಯ ಹೋಮ ನಡೆಸಲಾಯಿತು.

ದೈವಜ್ಞರ ಮೂಲಕ ನಡೆದ ಪ್ರಶ್ನಾಚಿಂತನೆಯಲ್ಲಿ ಕುಂಪಲ ಗ್ರಾಮದ ಪೂರ್ವ ದಿಕ್ಕಿನಲ್ಲಿ ದೈವ ಸಾನಿಧ್ಯ ಇರುವ ಬಗ್ಗೆ ಸುಳಿವು ಸಿಕ್ಕಿತ್ತು. ಆದರೆ, ಈ ದೈವದ ಗುಡಿ ಪಾಳು ಬಿದ್ದು ದೈವಕ್ಕೆ ಕಾಲಾದಿಯಲ್ಲಿ ನಡೆಯುವ ಪೂಜೆ, ಪುನಸ್ಕಾರಗಳು ನಿಂತಿರುವ ಬಗ್ಗೆ ಗೋಚರವಾಗಿದೆ. ಹೀಗಾಗಿ ದೈವ ಅಸಮಾಧಾನಗೊಂಡು ತನ್ನ ರೂಪವನ್ನು ಋಣಾತ್ಮಕವಾಗಿ ತೋರಿಸುತ್ತಿದೆ ಎಂದು ತಿಳಿದುಬಂದಿದೆ. 

ಈ ದೈವಸ್ಥಾನ ಬೆಳಗುವ ಮೊದಲು ಗ್ರಾಮದಲ್ಲಿ ಮಹಾ ಮೃತ್ಯುಂಜಯ ಯಾಗ ನಡೆಸುವಂತೆ ಪ್ರಶ್ನೆಯಲ್ಲಿ ಕಂಡುಬಂದಿತ್ತು. ಹೀಗಾಗಿ ಮೃತ್ಯು ಪಾಶದಿಂದ ಪಾರಾಗಲು ಹಿಂದೂ ಧರ್ಮದಲ್ಲಿ ನಡೆಸಲಾಗುವ ಮಹಾ ಮೃತ್ಯುಂಜಯ ಯಾಗವನ್ನು ಕುಂಪಲದ ಚಾಮುಂಡೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಸಲಾಯಿತು. ಗ್ರಾಮದ ಕೇಸರಿ ಮಿತ್ರ ವೃಂದ ಹಾಗೂ ಗ್ರಾಮಸ್ಥರು ಸೇರಿ ಪುರೋಹಿತ ವೃಂದದ ನೇತೃತ್ವದಲ್ಲಿ, ವೇದ ಮಂತ್ರ ಪಠಣಗಳೊಂದಿಗೆ ಅತೀದೊಡ್ಡ ಯಾಗ ನಡೆಸಲಾಯಿತು. ಗ್ರಾಮದ ಜನ 21 ದಿನಗಳ ವೃತಾಚರಣೆಯನ್ನು ಮಾಡಿ ಭಕ್ತಿ ಭಾವದಿಂದ ಯಾಗದಲ್ಲಿ ಭಾಗಿಯಾದರು.

ಮೃತ್ಯು ಭಯವನ್ನು ಶಮನಗೊಳಿಸಲು ಮಹಾ ಮೃತ್ಯುಂಜಯ ಯಾಗ ಮಾಡಲಾಗುತ್ತದೆ. ಇದೀಗ ಕುಂಪಲ ಗ್ರಾಮದಲ್ಲಿಯು ಈ ಯಾಗ ನಡೆಸಲಾಗಿದ್ದು ಸಕರಾತ್ಮಕ ವಾತಾವರಣ ಸೃಷ್ಟಿಯಾಗಿದೆ ಎಂದು ಅಲ್ಲಿನವರು ಹೇಳುತ್ತಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article