ಮತೀಯವಾದಿ, ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡಲು   ಜಾತ್ಯಾತೀಯ ಸಿದ್ಧಾಂತದಿಂದ ಮಾತ್ರ ಸಾಧ್ಯ: ಬಿ. ರಮಾನಾಥ ರೈ

ಮತೀಯವಾದಿ, ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡಲು ಜಾತ್ಯಾತೀಯ ಸಿದ್ಧಾಂತದಿಂದ ಮಾತ್ರ ಸಾಧ್ಯ: ಬಿ. ರಮಾನಾಥ ರೈ


ಅಡ್ಡೂರು: ದೇಶದ ಮತೀಯವಾದಿ, ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡಲು ದುರ್ಬಲ ಜಾತ್ಯಾತೀಯ ಪಕ್ಷ ಅಥವಾ ಸಂಘಟನೆಯಿಂದ ಸಾಧ್ಯವಿಲ್ಲ. ಬಲಿಷ್ಠವಾದ ಜಾತ್ಯಾತೀಯ ಸಿದ್ಧಾಂತ ಅಡಿಯಲ್ಲಿ ಕೆಲಸ ಮಾಡಿದರೆ ಮಾತ್ರ ಅದನ್ನು ನಿಗ್ರಹಿಸಲು ಸಾಧ್ಯ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಇಲ್ಲಿನ ಕಾಂಜಿಲಕೋಡಿಯ ನವೀಕೃತ ಬದ್ರುಲ್ ಹುದಾ ಜುಮಾ ಮಸೀದಿಯ ಉದ್ಘಾಟನೆ ಪ್ರಯುಕ್ತ ಭಾನುವಾರ ಆಯೋಜಿಸಿದ ಸೌಹಾರ್ದ ಸಂಗಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. 

ಜನರ ಮಧ್ಯೆ ಅಪನಂಬಿಕೆ, ಅವಿಶ್ವಾಸ ಹೆಚ್ಚಿರುವ ಈ ಕಾಲ ಘಟ್ಟದಲ್ಲಿ ನಾವೆಲ್ಲರೂ ಸೌಹಾರ್ದತೆಗೆ ಒತ್ತು ನೀಡಿ ಉಳಿಸುವ ಕಾರ್ಯ ಮಾಡಬೇಕು. ಹುಟ್ಟುವಾಗ ಇಂತಹದೇ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟಿದವರು ಯಾರು ಇಲ್ಲ. ಧಾರ್ಮಿಕ ಚೌಕಟ್ಟನ್ನು ಅರ್ಥಮಾಡಿ ಬದುಕುವುದೇ ಧರ್ಮ. ಎಲ್ಲ ಧರ್ಮದ ಜನರನ್ನು ಪ್ರೀತಿಸುವವರು ಅಧಿಕಾರಕ್ಕೆ ಬರಬೇಕು. ಜಾತಿ-ಧರ್ಮದ ಹೆಸರಿನಲ್ಲಿ ಜನರನ್ನು ದ್ವೇಷಿಸುವವರು ಅಧಿಕಾರ ಸ್ಥಾನಕ್ಕೆ ಬರಲು  ಅನರ್ಹರು ಎಂದು ಹೇಳಿದರು.

ಸೌಹಾರ್ದತೆ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ಕಾರ್ಯದಲ್ಲಿ ಏನು ಮಾಡುತ್ತೇವೆ ಅದು ಮುಖ್ಯ. ಹಿಂಸೆಗೆ ಹಿಂಸೆಯೇ ಉತ್ತರವಲ್ಲ. ದ್ವೇಷ ಹರಡುವವರನ್ನು ಪ್ರೀತಿಯ ಮೂಲಕ ಎದುರಿಸಬೇಕಾಗಿದೆ. ಅಹಿಂಸೆಗೆ ಒತ್ತು ನೀಡುವ ಮೂಲಕ ಸಾಮರಸ್ಯದ ಸಮಾಜ ಕಟ್ಟಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

ಇದಕ್ಕೂ ಮೊದಲು ಮಾತನಾಡಿದ ಎಸ್ಕೆಎಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ, ಕೋಮು ಸೌಹಾರ್ದತೆ ಇಂದಿನ ಕಾಲದ ಬೇಡಿಕೆ. ಎಲ್ಲ ಜಾತಿ-ಧರ್ಮಗಳು ಮಾನವೀಯತೆಯ ಬಗ್ಗೆ ಏಕಾಭಿಪ್ರಾಯವನ್ನು ಹೊಂದಿದೆ. ವೈವಿಧ್ಯತೆಯ ಧಾರ್ಮಿಕ-ಸಾಂಸ್ಕೃತಿ, ಬಹುತ್ವನ್ನು ಸ್ವೀಕರಿಸಿರುವ ಭಾರತದಲ್ಲಿ ಸೌಹಾರ್ದತೆಯ ಪರಂಪರೆಯೇ ಬೆಳೆಯುತ್ತದೆ ಹೊರತು ಏಕರೀತಿಯ ಸಂಸ್ಕೃತಿಯನ್ನು ಹೇರಲು ಪ್ರಯತ್ನ ಪಟ್ಟರೆ ಶಾಶ್ವತವಾಗಿ ನಲೆನಿಲ್ಲಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಎಸೆಸ್ಸೆಫ್ ರಾಜ್ಯಧ್ಯಕ್ಷ ಸೂಫಿಯಾನ್ ಸಖಾಫಿ, ಎಸ್.ಡಿ.ಪಿ.ಐ ಮಂಗಳೂರು ನಗರ ಅಧ್ಯಕ್ಷ ಜಲೀಲ್ ಕೃಷ್ಣಾಪುರ, ಬಿ.ಎಚ್.ಜೆ.ಎಂ ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಎಂ.ಎಚ್.ಮುಹಿಯುದ್ದೀನ್, ಆಸೀಫ್ ಆದರ್ಶ್ ಮಾತನಾಡಿದರು. 

ಕಾಂಜಿಲಕೋಡಿ ಬದ್ರುಲ್ ಹುದಾ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಝಕರಿಯಾ ಕೋಡಿಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕು ಮೊಯ್ದೀನ್ ಬಾವ, ಅಡ್ಡೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಸದಕತುಲ್ಲಾ ಫೈಝಿ, ಲತೀಫ್ ಗುರುಪುರ, ರಝಾಕ್ ಮಂಜೊಟ್ಟಿ, ಅರುಣ್ ಶೆಟ್ಟಿ,ಮೊಹಮ್ಮದ್ ಪೊಳಲಿ, ಉಸ್ಮಾನ್ ಏರ್ ಇಂಡಿಯಾ, ಹಾಜಿ ಇಸ್ಮಾಯೀಲ್ ಗೇಟ್ ಹೌಸ್, ಇಬ್ರಾಹೀಂ ಬೊಟ್ಟಿಕೆರೆ, ಲತೀಫ್ ಸಿ.ಎಂ, ಶರೀಫ್ ಪೊನ್ನೆಲ, ನೌಫಲ್ ಕೋಡಿಬೆಟ್ಟು, ಎ.ಕೆ.ಆರಿಸ್, ಇಕ್ಬಾಲ್, ಶಮೀರ್ ನೂಯಿ, ಹಸನ್ ಪೊನ್ನೆಲ, ಕಮಲ್ ಕಾಂಜಿಲಕೋಡಿ, ಎ.ಕೆ.ಮುಸ್ತಫಾ, ಇಂಜಿನಿಯರ್ ಗಳಾದ ಮುಝಮ್ಮಿಲ್, ಹಬೀಬ್ ಅಹ್ಮದ್, ಗ್ರಾ.ಪಂ.ಸದಸ್ಯ ಎ.ಕೆ. ಅಶ್ರಫ್, ಸದರ್ ಮುಅಲ್ಲಿಂ ಮುಹಮ್ಮದ್ ಮುಸ್ತಫಾ ಹನೀಫಿ, ಮೊಹಿಯುದ್ದೀನ್ ಸಅದಿ, ಫಾರೂಖ್ ಯಮಾನಿ ಮತ್ತಿತರರು ಉಪಸ್ಥಿತರಿದ್ದರು.

ಕಾಂಜಿಲಕೋಡಿ ಬಿ.ಎಚ್.ಜೆ.ಎಂ ಖತೀಬ್ ಯಾಕೂಬ್ ಫೈಝಿ ದುಆ ನೆರವೇರಿಸಿದರು. ಎ.ಕೆ. ರಿಯಾಝ್ ಸ್ವಾಗತಿಸಿದರು. ಮೊಹಮ್ಮದ್ ಕುಂಞಿ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article