
ಅಂಗವೈಕಲ್ಯವನ್ನು ಮೀರಿ ಬದುಕುವ ಛಲ ಬರಬೇಕು: ಜಯಪ್ರಕಾಶ್
ಮಂಗಳೂರು: ಜನಿಸುವಾಗಲೇ ಯಾವುದಾದರೂ ವೈಕಲ್ಯವಿದ್ದಲ್ಲಿ ಮಕ್ಕಳು ಅದಕ್ಕೆ ಹೊಂದಿಕೊಳ್ಳುತ್ತಾರೆ. ಆದರೆ ನಂತರ ಉಂಟಾಗುವ ವೈಕಲ್ಯಕ್ಕೆ ಹೊಂದಿಕೊಳ್ಳಲು ವ್ಯಕ್ತಿಯೊಬ್ಬನಿಗೆ ಬಹಳ ಕಷ್ಟವಾಗುತ್ತದೆ. ಇದನ್ನು ಮೀರಿ ಬದುಕುವ ಛಲ ಇಂತವರಲ್ಲಿ ಬರಬೇಕಾಗುತ್ತದೆ ಎಂದು ಮಂಗಳೂರು ತಾಲೂಕ್ ಪಂಚಾಯತ್‌ನ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಜಯಪ್ರಕಾಶ್ ಹೇಳಿದರು.
ಅವರು ಭಾನುವಾರ ಕಾವೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ನಗರದ ಕಾವೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯಶ ಆಟಿಸಂ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ರೀತಿಯ ನ್ಯೂನತೆಯಿರುವವರನ್ನು ಸಮಾಜ ಕೀಳಾಗಿ ಕಾಣುತ್ತಿರುವುದು ಖೇದಕರ. ಇವರನ್ನು ಪ್ರೋತ್ಸಾಹಿಸುವ ಕೆಲಸವನ್ನು ನಾವೆಲ್ಲ ಮಾಡಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಟಿಸಂ ಸ್ಥಿತಿ ಇರುವವರನ್ನು ಸುಧಾರಿಸಲು ಸ್ಪಷ್ಟವಾದ ನೀತಿಯನ್ನು ರೂಪಿಸಬೇಕೆಂಬ ಮನವಿಯನ್ನು ಸಲ್ಲಿಸಲಾಯಿತು.
ಟ್ರಸ್ಟಿ ಡಾ. ವಿದ್ಯಾ ಎಸ್. ಮಾತನಾಡಿ, ಇಂತಹ ಮಕ್ಕಳಿಗೆ ವೈಯಕ್ತಿಕ ಗಮನ ಹರಿಸಿ ತರಬೇತಿ ನೀಡುತ್ತಿರುವ ಶಿಕ್ಷಕರು ಮತ್ತು ಪೋಷಕರನ್ನು ಅಭಿನಂದಿಸಿ, ಈ ಸಂಸ್ಥೆಗೆ ಸರ್ಕಾರದಿಂದ ಹೆಚ್ಚಿನ ಬೆಂಬಲ ಬೇಕಿದೆ ಎಂದು ಮನವಿ ಮಾಡಿದರು.
ಸಂಸ್ಥೆಯ ನಿರ್ದೇಶಕಿ ದುರ್ಗಾಲಕ್ಷ್ಮೀ ಸಂಸ್ಥೆಯ ಚಟುವಟಿಕೆಯ ವರದಿಯನ್ನು ಪ್ರಸ್ತುತಪಡಿಸಿದರು.
ವಿಶೇಷ ಶಿಕ್ಷಕ ಮಂಜುನಾಥ್ ಮಾತನಾಡಿ, ವಯಸ್ಕರಾದ ಆಟಿಸಂ ಬಾಧಿತರನ್ನು ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಕೌಶಲಗಳನ್ನು ಕಲಿಸುವ ಪ್ರಯತ್ನ ಮಾಡುತ್ತಿರುವ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ನಿವೃತ್ತ ಪ್ರಾಧ್ಯಾಪಕ ಡಾ. ಶಿವಪ್ರಕಾಶ್ ಮಾತನಾಡಿ, ಈ ಮಕ್ಕಳಿಗೆ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಪ್ರೋತ್ಸಾಹ ನೀಡುತ್ತಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಗೀತಾ ಎಂ.ಎಲ್. ಮಾತನಾಡಿ, ಈ ಮಕ್ಕಳನ್ನು ವಿಕಲಚೇತನರೆಂದು ಪರಿಗಣಿಸದೆ ಅವರಲ್ಲಿರುವ ಪ್ರತಿಭೆಯನ್ನು ಹುಡುಕಿ ಪ್ರೋತ್ಸಾಹ ನೀಡಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಕಲ ಚೇತನ ಸಹೋದರಿಯನ್ನು ಪೋಷಿಸುತ್ತಿರುವ ಚಂದ್ರಕಲಾ ಅವರನ್ನು ಗೌರವಿಸಲಾಯಿತು. ಸಂಸ್ಥೆಯ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಪಶುಪತಿ ಆಚಾರ್ಯ ಅವರು ಯಕ್ಷಗಾನದ ಹಾಡುಗಳನ್ನು ಹಾಡಿ ಮಕ್ಕಳನ್ನು ರಂಜಿಸಿದರು. ಧೀರಜ್ ಆಚಾರ್ಯ ಚೆಂಡೆ ಹಾಗೂ ಅಕ್ಷರಶ್ಯಾಮ ಮಳಿ ಮದ್ದಳೆಯಲ್ಲಿ ಸಹಕರಿಸಿದರು. ಬಳಿಕ ಸಂಸ್ಥೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಮಂಗಳೂರು ದಕ್ಷಿಣ ವಲಯದ ವಿಶೇಷ ಸಂಪನ್ಮೂಲ ಶಿಕ್ಷಕಿ ಜ್ಯೋತಿ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯದರ್ಶಿ ಚೇತನ್, ಯಶ ವಿದ್ಯಾರ್ಥಿ ಪ್ರತಿನಿಧಿ ಸುಧೀರ್ ಉಪಸ್ಥಿತರಿದ್ದರು.
ಟ್ರಸ್ಟಿ ಸುನೀಲ್ ಜಿ.ಬಿ. ಸ್ವಾಗತಿಸಿದರು. ಮಂಜುನಾಥ್ ವಂದಿಸಿ, ಶಿಕ್ಷಕಿ ಚಂದ್ರಿಕಾ ಕಾರ್ಯಕ್ರಮ ನಿರ್ವಹಿಸಿದರು.