
ಮಂಗಳಮುಖಿಯರ ವೇಷ ಧರಿಸಿ ಭಿಕ್ಷಾಟಣೆ: ಕ್ರಮಕ್ಕೆ ಜಿ.ಪಂ ಸಿ.ಇ.ಓ ಸೂಚನೆ
ಮಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಜಿಲ್ಲಾ ಸಮಿತಿ ಸಭೆಗಳು ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್‌ನಲ್ಲಿ ನಡೆಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆನಂದ್ ಕೆ. ಮಾತನಾಡಿ, ಧನಶ್ರೀ (ಹೆಚ್.ಐ.ವಿ ಸೋಂಕಿತ ಮಹಿಳೆಯರಿಗೆ) ಮತ್ತು ಚೇತನ ಯೋಜನೆಯಡಿಯಲ್ಲಿ (ದಮನಿತ ಮಹಿಳೆಯರಿಗೆ) ಸ್ವ ಉದ್ಯೋಗಕ್ಕೆ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. ಯೋಜನೆಯ ಮಾಹಿತಿಯನ್ನು ಅವರಿಗೆ ನೀಡಬೇಕು. ಜಿಲ್ಲೆಯಲ್ಲಿನ ತೃತೀಯಲಿಂಗಿಗಳಿಗೆ ಗುರುತು ಚೀಟಿಗಳಿಗೆ ನೋಂದಾಯಿಸಲು ವ್ಯಕ್ತಿಗಳ ಪರಿಶೀಲನೆ ನಡೆಸಿ ಗುರುತು ಚೀಟಿ ನೀಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಬ್ಯಾಂಕ್ ಪಾಸ್ ಬುಕ್, ಪಡಿತರ ಚೀಟಿ, ವೋಟರ್ ಐಡಿ, ಆಧಾರ್ ಕಾರ್ಡ್, ವಿಮಾ ಯೋಜನೆಗಳನ್ನು ಅವರಿಗೆ ಒದಗಿಸಬೇಕು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಅವರಿಗೆ ನಿವೇಶನ ವಸತಿ ಒದಗಿಸಿಕೊಡುವ ಪ್ರಯತ್ನವಾಗಬೇಕು ಎಂದು ತಿಳಿಸಿದರು.
ನಗರದಲ್ಲಿ ಬೇರೆ ರಾಜ್ಯದ ಮಹಿಳೆಯರು ಮಂಗಳಮುಖಿಯರಂತೆ ವೇಷಧರಿಸಿ ಭಿಕ್ಷಾಟನೆ, ವೇಶ್ಯಾವಾಟಿಕೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಭಿಕ್ಷಾಟನೆಯ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿಯೊಂದು ವಿದ್ಯಾ ಸಂಸ್ಥೆಯಲ್ಲಿ ಹೆಚ್‌ಐವಿ ಸೋಂಕಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಮಾಡಬೇಕು. ಹೆಚ್.ಐ.ವಿ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿ ಏರ್ಪಡಿಸಬೇಕು. ಸಾರ್ವಜನಿಕರಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಅರಿವು ಮೂಡಿಸಬೇಕು ಎಂದು ಸಿ.ಇ.ಓ ತಿಳಿಸಿದರು.
ಕೆಲಸ ನಡೆಯುವ ಸ್ಥಳಗಳಲ್ಲಿ 18 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳಬಾರದು. ಯಾವುದೇ ಹೋಟೆಲ್ ರೆಸ್ಟೋರೆಂಟ್‌ನಲ್ಲಿ ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡಿಲ್ಲ ಎಂಬ ಸ್ವಯಂ ಘೋಷಣೆಯ ಬೋರ್ಡ್ ಹಾಕಬೇಕು ಎಂದರು.
ಕೌಟುಂಬಿಕ ಹಿಂಸೆ ಮಹಿಳೆ ಮತ್ತು ಮಕ್ಕಳ ಅನೈತಿಕ ಸಾಗಾಟ ಮತ್ತು ಮಾರಾಟ, ಮಹಿಳೆಯರ ವಿರುದ್ಧ ನಡೆಯುವ ದೌರ್ಜನ್ಯಗಳ ಬಗ್ಗೆ ಪ್ರತಿ ಗ್ರಾಮ ಸಭೆಯಲ್ಲಿ ಚರ್ಚಿಸಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಎ, ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ವಿಟ್ಲ, ಪುತ್ತೂರು ಹಾಗೂ ಸುಳ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.