ಕುಡಿಯುವ ನೀರು, ಆಸ್ತಿ ತೆರಿಗೆ, ಪರವಾನಿಗೆ ಶುಲ್ಕ ಏರಿಕೆಯ ಚರ್ಚೆ

ಕುಡಿಯುವ ನೀರು, ಆಸ್ತಿ ತೆರಿಗೆ, ಪರವಾನಿಗೆ ಶುಲ್ಕ ಏರಿಕೆಯ ಚರ್ಚೆ


ಉಳ್ಳಾಲ: ಕುಡಿಯುವ ನೀರು, ಆಸ್ತಿ ತೆರಿಗೆ ಹೆಚ್ಚಳ, ಪರವಾನಿಗೆ ಶುಲ್ಕ ಏರಿಕೆ, ರಸ್ತೆ ಅಗಲೀಕರಣ, ಕೊಳಚೆ ನೀರು ತಡೆಗಟ್ಟುವಿಕೆ ಮುಂತಾದ ವಿಷಯಗಳ ಬಗ್ಗೆ ಪರ, ವೀರೋಧ ಚರ್ಚೆಗಳು ಸೋಮೇಶ್ವರ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಪುರಸಭೆ ಅಧ್ಯಕ್ಷ ಕಮಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಸ್ತಿ ತೆರಿಗೆ ಶೇ.ಮೂರಷ್ಟು ಏರಿಕೆ ಮಾಡುವ ಬಗೆ ಮುಖ್ಯಾಧಿಕಾರಿ ಮತಡಿ ಸಭೆಯಲ್ಲಿ ಪ್ರಸ್ತಾಪಿಸಿದಾಗ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಪುರುಷೋತ್ತಮ ಶೆಟ್ಟಿ ಪಿಲಾರ್ ತೆರಿಗೆ ಹೆಚ್ಚಳದಿಂದ ಜನರಿಗೆ ತೊಂದರೆ ಆಗುತ್ತದೆ. ಜನರಿಗೆ ಹೊರೆ ಮಾಡುವುದು ಬೇಡ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ರವಿಶಂಕರ್ ಅವರು ತೆರಿಗೆ ಹೆಚ್ಚಳಕ್ಕೆ ಯಾರ ಸಹಮತ ಇಲ್ಲ. ಆದರೆ ಸರ್ಕಾರದ ಆದೇಶದಂತೆ ಏರಿಕೆ ಮಾಡದಿದ್ದರೆ ಕಾರ್ಯ ಚಟುವಟಿಕೆಗಳು ನಡೆಯುವುದಿಲ್ಲ ಎಂದರು. ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಮತಡಿ ಅವರು ತೆರಿಗೆ ಏರಿಕೆ ಕಡ್ಡಾಯ. ಅದು ಮಾಡಲೇಬೇಕು ಎಂದು ಸಭೆಗೆ ತಿಳಿಸಿದರು.

ಪುರಸಭಾ ವ್ಯಾಪ್ತಿಯಲ್ಲಿ ಅಳವಡಿಸುವ ಬ್ಯಾನರ್, ಪ್ಲೆಕ್ಸ್, ಹೋರ್ಡಿಂಗ್‌ಗೆ ಶುಲ್ಕ ವಿಧಿಸುವ ಬಗ್ಗೆ ಸಭೆಯಲ್ಲಿ ಮುಖ್ಯಾಧಿಕಾರಿ ಮತಡಿ ಪ್ರಸ್ತಾಪಿಸಿದಾಗ ವ್ಯಾಪಕ ಆಕ್ಷೇಪ ವ್ಯಕ್ತವಾಯಿತು. ವಿರೋಧ ಪಕ್ಷದ ಸದಸ್ಯ ಪುರುಷೋತ್ತಮ ಶೆಟ್ಟಿ ಪಿಲಾರ್ ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ್ ಸಾಧಾರಣ ಇರುತ್ತದೆ. ಇದಕ್ಕೆ ಶುಲ್ಕ ಬೇಡ. ಹಾಕುವ ಮೊದಲು ಪರವಾನಿಗೆ ಪಡೆಯಲಿ. ಕೆಲವು ಬ್ಯಾನರ್ 15 ಗಳ ಇರುತ್ತದೆ ಎಂದರು. ಇದಕ್ಕೆ ದೀಪಕ್ ಪಿಲಾರ್ ಸಹಮತ ವ್ಯಕ್ತಪಡಿಸಿದರು.

ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 10 ಸಾವಿರ ಅನುದಾನ ನೀಡಲು ಸಭೆಯಲ್ಲಿ ಸಹಮತ ವ್ಯಕ್ತವಾಯಿತು.

ಕೊಳಚೆ ನೀರು: ಕುಂಪಲ ಬೈಪಾಸ್,ದಾರಂದ ಬಾಗಿಲು ಖಾಸಗಿ ಫ್ಲ್ಯಾಟ್‌ಗಳಿಂದ ಕೊಳಚೆ ನೀರು ಹರಿದು ಒಂದೆಡೆ ಶೇಖರಣೆ ಆಗುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯೆ ಪರ್ವೀನ್ ಸಭೆಯಲ್ಲಿ ಒತ್ತಾಯಿಸಿದರು. ಈ ವೇಳೆ ಪುರುಷೋತ್ತಮ ಶೆಟ್ಟಿ ಪಿಲಾರ್ ದಾರಂದ ಬಾಗಿಲು ಬಳಿ ಬಾಡಿಗೆ ಕಟ್ಟಡದಲ್ಲಿ ಇದೇ ರೀತಿಯ ಸಮಸ್ಯೆ ಇದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.

ಇದಕ್ಕೆ ಉತ್ತರಿಸಿದ ಪೌರಾಯುಕ್ತ ಮತಡಿ ಅವರು ಫ್ಲ್ಯಾಟ್‌ಗಳಿಗೆ ಕೊಳಚೆ ನೀರು ರಸ್ತೆಗೆ, ಚರಂಡಿಗೆ ಬಿಡದಂತೆ ಸೂಚಿಸಿ ನೋಟಿಸ್ ನೀಡಲಾಗಿದೆ. ಇದಕ್ಕೆ ಮಾಲೀಕರು ಸ್ಪಂದಿಸದ ಕಾರಣ ಇಂತಹ ಕಟ್ಟಡದ ವಿರುದ್ಧ ಠಾಣೆಗೆ ದೂರು ನೀಡಲಾಗುವುದು ಎಂದು ಹೇಳಿದರು.

ಸರ್ವಿಸ್ ರಸ್ತೆ: ಅಂಬಿಕಾ ರಸ್ತೆಯಿಂದ ತಲಪಾಡಿ ವರೆಗೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸರ್ವಿಸ್ ರಸ್ತೆ ನಿರ್ಮಿಸುವ ಬಗ್ಗೆ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡುವ ಸಭೆಯಲ್ಲಿ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಉಪಾಧ್ಯಕ್ಷ ರವಿಶಂಕರ್ ಅವರು ಈ ಬಗ್ಗೆ ನಿರ್ಣಯ ಕೈಗೊಂಡು ನಿರ್ಣಯ ಪ್ರತಿಯೊಂದಿಗೆ ಮನವಿ ಅರ್ಪಿಸಲು ತೀರ್ಮಾನಿಸಲಾಗಿದೆ ಎಂದರು. 

ನೀರಿನ ದರ: ಕುಡಿಯುವ ನೀರಿನ ಮಾಸಿಕ ಶುಲ್ಕ ಏರಿಕೆ ಬಗ್ಗೆ ಸಭೆಯಲ್ಲಿ ಮುಖ್ಯಾಧಿಕಾರಿ ಮತಡಿ ಪ್ರಸ್ತಾಪಿಸಿದಾಗ ಆಕ್ಷೇಪ ವ್ಯಕ್ತವಾಯಿತು. ಈ ವೇಳೆ ಸದಸ್ಯ ಮನೋಜ್ ಅವರು ನೀರಿನ ಶುಲ್ಕ ಏರಿಕೆ ಈಗ ಬೇಡ. ಪೈಪ್‌ಲೈನ್ ಕಾಮಗಾರಿ ಮುಗಿದ ಮೇಲೆ ತೀರ್ಮಾನ ಮಾಡೋಣ ಎಂದು ಹೇಳಿದರು.

ಕುಡಿಯುವ ನೀರು: ಕಾಟಗರ ಗುಡ್ಡೆ ಸಮೀಪ ಸಮರ್ಪಕ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ಇದರಿಂದ ಬಹಳಷ್ಟು ಕುಟುಂಬ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಪುರಸಭೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯೆ ತಾಯಿರಾ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ರವಿಶಂಕರ್ ಅವರು ನೀರು ಬಿಡುವವರನ್ನು ಕರೆದು ಸಭೆ ನಡೆಸಿ ವ್ಯವಸ್ಥೆ ಮಾಡಲಾಗುವುದು.ಪೈಪ್ ಲೈನ್ ಕಾಮಗಾರಿ ಆಗದ ಪ್ರದೇಶಕ್ಕೆ ಪೈಪ್ ಲೈನ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಲಾಗುವುದು ಎಂದರು.

ಬಿ ಖಾತೆ: ಅನಧಿಕೃತ ಆಸ್ತಿ ಹೊಂದಿರುವವರು ಬಿ.ಖಾತೆ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭ ಮುಖ್ಯಾಧಿಕಾರಿ ಮತಡಿ ಮಾತನಾಡಿ, ಈಗಾಗಲೇ 2800 ಬಿ.ಖಾತೆ ನೀಡಲಾಗಿದೆ. ಉಳಿದವರಿಗೆ ಒಂದು ಜಾಗದಲ್ಲಿ ಸಭೆ ನಡೆಸಿ ಬಿ.ಖಾತೆ ಹಂಚುವ ಕೆಲಸ ಆಗಬೇಕು ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಹರೀಶ್ ಅವರು ಬಿ ಖಾತೆ ಬೇಕಾದವರು ಕಚೇರಿಗೆ ಬಂದು ಪಡೆಯುತ್ತಾರೆ.ಅವರನ್ನು ಕರೆಸಿ ನೀಡಬೇಕಿಲ್ಲ ಎಂದು ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article