
ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ನಗ-ನಗದಿನ ಬ್ಯಾಗ್ ನಾಪತ್ತೆ
ಬಂಟ್ವಾಳ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೋರ್ವರ ಬ್ಯಾಗ್‌ನಲ್ಲಿದ್ದ ಅಂದಾಜು 10.08 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 3000 ರೂ. ನಗದು ಕಳವಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಯಲಹಂಕ ನ್ಯೂ ಟೌನ್ ನಿವಾಸಿ ರಾಜಗೋಪಾಲ್ ಕಾರಂತ್ (68) ಎಂಬವರು ನೀಡಿದ ದೂರಿನನ್ವಯ ಕೇಸುದಾಖಲಾಗಿದೆ.
ಅವರು ತಮ್ಮ ಪತ್ನಿಯ ತವರು ಮನೆ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಮುಲ್ಕಾಜೆ ಮಾಡ್‌ಗೆ ಖಾಸಗಿ ಕಾರ್ಯಕ್ರಮಕ್ಕಾಗಿ ತೆರಳುತ್ತಿದ್ದರು. ಫೆ.1 ರಂದು ರಾತ್ರಿ ಬೆಂಗಳೂರು ಮೆಜೆಸ್ಟಿಕ್‌ನಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪತ್ನಿ ಮತ್ತು ಅಳಿಯನೊಂದಿಗೆ ಬಾಕ್ಸ್‌ನಲ್ಲಿ ಚಿನ್ನ ಹಾಗೂ 3 ಸಾ.ರೂ. ನಗದು ಹಣವನ್ನು ತಮ್ಮ ಲಗೇಜು ಬ್ಯಾಗ್‌ನಲ್ಲಿರಿಸಿ ಹೊರಟಿದ್ದಾರೆ.
ಕುಣಿಗಲ್ ಬಳಿ ಬಸ್ ನಿಂತಾಗ, ಅವರ ಹೆಂಡತಿ ಮತ್ತು ಅಳಿಯ ಚಿನ್ನಾಭರಣ ಹಾಗೂ ನಗದು ಹಣವಿದ್ದ ಬ್ಯಾಗನ್ನು ಬಸ್ಸಿನಲ್ಲಿ ಇರಿಸಿ ಶೌಚಾಲಯಕ್ಕೆ ಹೋಗಿದ್ದರೆ. ಫೆ.2 ರಂದು ಬಂಟ್ವಾಳ ಕಾರಿಂಜಾ ಕ್ರಾಸ್ ತಲುಪಿ ತಮ್ಮ ಬ್ಯಾಗ್ ತೆರೆದಾಗ 144 ಗ್ರಾಂ. ಚಿನ್ನ ಮತ್ತು ನಗದು ನಾಪತ್ತೆಯಾಗಿರುವುದು ಕಂಡು ಬಂದಿದೆ.
ಬಸ್ಸಿನೊಳಗೆ ಅಥವಾ ಕುಣಿಗಲ್‌ನ ಹೋಟೆಲ್ ಬಳಿ ಈ ಕಳವು ನಡೆದಿರುವ ಶಂಕೆ ವ್ಯಕ್ತಪಡಿಸಿ ರಾಜಗೋಪಾಲ್ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.