
ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ಗುಂಡ್ಮಿ ಗೋಪಾಲ್ ಖಾರ್ವಿಗೆ ಚಿನ್ನ
Monday, February 3, 2025
ಕುಂದಾಪುರ: ಬ್ರಹ್ಮಾವರ ತಾಲೂಕು ಗುಂಡ್ಮಿ ನಿವಾಸಿ ಗೋಪಾಲ್ ಖಾರ್ವಿ ಕೋಡಿ ಕನ್ಯಾನ ಇವರು, ತಪಸ್ಯ ಫೌಂಡೇಶನ್, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಐ.ಡಿ.ಎಫ್.ಸಿ. ಫಸ್ಟ್ ಬ್ಯಾಂಕ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಮಂಗಳೂರಿನ ತಣ್ಣೀರು ಬಾವಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಟ್ರೆಯಥ್ಲಾನ್ ಸ್ಪರ್ಧೆಯ ಒಂದು ಕಿ.ಮೀ. ಸಮುದ್ರ ಈಜು ಸ್ಪರ್ಧೆಯಲ್ಲಿ 16.02 ನಿಮಿಷ ಈಜಿ ಚಿನ್ನದ ಪದಕ ಪಡೆದಿರುತ್ತಾರೆ.
ಇವರು ಉಡುಪಿಯ ಅಜ್ಜರಕಾಡು ಈಜು ಕೊಳದ ತರಬೇತುದಾರರಾಗಿರುತ್ತಾರೆ. ಈಜುವುದರಲ್ಲಿ ನಿಷ್ಣಾತರಾಗಿರುವ ಗೋಪಾಲ್ ಖಾರ್ವಿ 2013ರಲ್ಲಿ ಕೈ ಕಾಲುಗಳನ್ನು ಕೋಳದಿಂದ ಬಂಧಿಸಿ ಅರಬ್ಬಿ ಸಮುದ್ರದಲ್ಲಿ 3.71 ಕಿ.ಮೀ. ಈಜಿ ಗಿನ್ನಿಸ್ ವಿಶ್ವ ದಾಖಲೆ ಮಾಡಿದ್ದರು.
ಇವರಿಗೆ ಭಾರತ ಮತ್ತು ಅಮೇರಿಕನ್ ವಿಶ್ವವಿದ್ಯಾಲಯಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳಾದ ಬೆಸ್ಟ್ ಸ್ಪೋರ್ಟ್ಸ್ ಅಚಿವರ್ ಅವಾರ್ಡ್ ಮತ್ತು ಸರ್ಟಿಫಿಕೇಟ್ ಆಫ್ ಎಕ್ಸಲೆನ್ಸ್ ಅವಾರ್ಡ್‌ಗಳನ್ನು ನೀಡಿ ಗೌರವಿಸಿದ್ದವು. ಈ ಹಿಂದೆ ಗೋಪಾಲ್ ಖಾರ್ವಿಯವರು ಕರ್ನಾಟಕದ ಅತ್ಯುತ್ತಮ ಪ್ರಶಸ್ತಿಗಳಾದ ಕರ್ನಾಟಕ ರಾಜ್ಯೋತ್ಸವ, ಹಾಗೂ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗಳನ್ನು, ರಾಜ್ಯ ಮಟ್ಟದ ಸಂದೇಶ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.
ಇವರ ಈ ಸಾಧನೆಯನ್ನು ಮನಗಂಡ ರಾಜ್ಯ ಸರಕಾರವು ಕರ್ನಾಟಕದ ಕೊಂಕಣಿ 9ನೇ ತರಗತಿಯ ಪಠ್ಯ ಪುಸ್ತಕದಲ್ಲಿ ‘ಜೀವನ ಚರಿತ್ರೆ ಗೋಪಾಲ್ ಖಾರ್ವಿ’ ಎಂಬ ಪಾಠವನ್ನು ಪ್ರಕಟಿಸಿರುವುದು ಅವರ ಸಾಧನೆಗೆ ಸಂದ ಅತ್ಯಂತ ಗೌರವಯುತ ಪ್ರಶಸ್ತಿಗಳಲ್ಲೊಂದು.