
ಉಸ್ತುವಾರಿ ಸಚಿವರಿಂದ ಪೊಳಲಿ-ಅಡ್ಡೂರು ಸೇತುವೆಯ ಕಾಮಗಾರಿಯ ವೀಕ್ಷಣೆ: ಪೊಳಲಿ ಕ್ಷೇತ್ರಕ್ಕು ಭೇಟಿ
ಬಂಟ್ವಾಳ: ನಾದುಸ್ಥಿತಿಯಲ್ಲಿರುವ ಪೊಳಲಿ-ಅಡ್ಡೂರು ರಾಜ್ಯ ಹೆದ್ದಾರಿಯ ಸೇತುವೆಯ ಧಾರಣಾ ಸಾಮಥ್ಯ೯ ಬಲಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚುವ ದಿನೇಶ್ ಗುಂಡೂರಾವ್ ಅವರು ಬುಧವಾರ ವೀಕ್ಷಿಸಿದರು.
ನದಿಗಳಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಹಳೆ ಮತ್ತು ಹೊಸ ಸೇತುವೆಗಳ ಎರಡೂ ಪಾರ್ಶ್ವದಲ್ಲಿ ಸುಮಾರು 500 ಮೀ. ಅಂತರದಲ್ಲಿ ಮರಳುಗಾರಿಕೆ ನಡೆಸದಂತೆ ಪಿಡಬ್ಲ್ಯೂಡಿ ಇಲಾಖೆ ಕಣ್ಗಾವಲು ಇರಿಸಬೇಕು, ಸೇತುವೆಗಳ ನಿರ್ವಹಣೆಯ ವಿಚಾರದಲ್ಲು ಇಲಾಖೆ ನಿರ್ಲಕ್ಷ್ಯ ತೋರಬಾರದು ಎಂದು ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಸೇತುವೆಯ ಅಕ್ಕ ಪಕ್ಕದಲ್ಲಿ ಮರಳುಗಾರಿಕೆಯಿಂದ ಸೇತುವೆಗಳು ದುರ್ಬಲಗೊಳ್ಳುತ್ತಿರುವ ಘಟನೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಸೇತುವೆಗಳ ರಕ್ಷಣೆಗೆ ಅಡ್ಡೂರು ಸೇತುವೆ ಸೇರಿದಂತೆ ಎಲ್ಲಾ ಪ್ರಮುಖ ಸೇತುವೆಗಳ ಎರಡು ಬದಿಗಳಲ್ಲಿ ಸಿಸಿ ಟಿವಿ ಅಳವಡಿಸಿ ನಿರಂತರವಾಗಿ ನಿಗಾ ವಹಿಸುವಂತೆ ಸಚಿವರು ಸೂಚಿಸಿದರು.
ಅಡ್ಡೂರು ಸೇತುವೆ ಬಲಗೊಳಿಸುವ ಕಾಮಗಾರಿ ಸುಮಾರು ೬.೧೦ ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ಇಲ್ಲಿ ಪ್ರತ್ಯೇಕವಾಗಿ ಹೊಸ ಸೇತುವೆ ನಿರ್ಮಿಸಬೇಕೆಂಬ ಸಾರ್ವಜನಿಕರ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಮೇ.ಗೆ ಕಾಮಗಾರಿ ಪೂರ್ಣ:
ಪೊಳಲಿ-ಅಡ್ಡೂರು ಸೇತುವೆಯ ಧಾರಣಾ ಸಾಮರ್ಥ್ಯ ಹೆಚ್ಚಿಸುವ ಕಾಮಗಾರಿ ಆರಂಭಗೊಂಡಿದ್ದು, ಮೇ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ. ಅಲ್ಲಿಯವರೆಗೆ ಘನ ವಾಹನಗಳ ಸಂಚಾರಕ್ಕೆ ನಿಷೇಧ ಮುಂದುವರಿಯಲಿದ್ದು, ಧಾರಣಾ ಸಾಮರ್ಥ್ಯ ವೃದ್ಧಿ ಕಾಮಗಾರಿ ಮುಗಿದ ಬಳಿಕ ಸೇತುವೆಯಲ್ಲಿ ಎಲ್ಲ ವಾಹನಗಳ ಸಂಚಾರ ಪುನರಾರಂಭಗೊಳ್ಳಲಿದೆ. ಸೇತುವೆಯ ಕೆಲವು ಬೇಯರಿಂಗ್ ಬದಲಿಸುವಿಕೆ ಹಾಗೂ ಗರ್ಡರ್‌ಗಳ ದುರಸ್ತಿ ಕಾರ್ಯ ಆಗಬೇಕಿದೆ ಎಂದು ಉಪಸ್ಥಿತರಿದ್ದ ಪಿಡಬ್ಲ್ಯೂಡಿ ಕಾರ್ಯನಿರ್ವಹಣಾ ಇಂಜಿನಿಯರ್ ಅಮರನಾಥ್ ತಿಳಿಸಿದರು.
ಪೊಳಲಿ ದೇವಳಕ್ಕೆ ಭೇಟಿ:
ಸಚಿವ ದಿನೇಶ್ ಗುಂಡೂರಾವ್ ಅವರು, ಸೇತುವೆ ಕಾಮಗಾರಿ ಪರಿಶೀಲನೆ ಬಳಿಕ ನೇರವಾಗಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ದೇವಸ್ಥಾನದ ಅರ್ಚಕರಾದ ಮಾಧವ ಭಟ್, ಪರಮೇಶ್ವರ ಭಟ್ ಅವರು ಸಚಿವರಿಗೆ ದೇವರ ಪ್ರಸಾದ ನೀಡಿ, ಶಾಲು ಹೊದೆಸಿ ಗೌರವಿಸಿದರು. ಅರ್ಚಕರಾದ ನಾರಾಯಣ ಭಟ್, ರಾಮ ಭಟ್, ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ವಾಸ್ತುಶಿಲ್ಪದ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಚಿವರೊಂದಿಗೆ ಎಂಎಲ್‌ಸಿ ಡಾ. ಮಂಜುನಾಥ ಭಂಡಾರಿ, ಮಾಜಿ ಸಚಿವ ರಮಾನಾಥ ರೈ, ಮಾಜಿ ಎಂಎಲ್‌ಸಿ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಧಾ, ಸದಸ್ಯ ಚಂದ್ರಹಾಸ ಪಲ್ಲಿಪಾಡಿ, ಪಂಚಾಯತ್ ಸದಸ್ಯರು, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ಪಕ್ಷದ ಮುಖಂಡರಾದ ಸುರೇಂದ್ರ ಕಂಬಳಿ, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಸಹಾಯಕ ಆಯುಕ್ತ ಹರ್ಷವರ್ಧನ್, ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಪಡುಪೆರಾರ ವಿಎ ದೇವರಾಜ್,ಪೊಳಲಿ ಸಿಎ ಬ್ಯಾಂಕ್ ಅಧ್ಯಕ್ಷ ವೆಂಕಟೇಶ ನಾವಡ, ಗುತ್ತಿಗೆದಾರರಾದ ಸುಧಾಕರ ಶೆಟ್ಟಿ ಮೊಗ್ರೋಡಿ, ಪ್ರಧಾನ ಇಂಜಿನಿಯರ್ ಸುಬ್ರಹ್ಮಣ್ಯ ಮತ್ತಿತರರಿದ್ದರು.