
ಕರಿಮಲೆ: ಖಾಸಗಿ ಜಮೀನಿಗೆ ಬೆಂಕಿ
ಬಂಟ್ವಾಳ: ಇಲ್ಲಿಯ ಸುತ್ತಮುತ್ತ ಮೂರು ಕಡೆಗಳಲ್ಲಿ ಮಂಗಳವಾರ ಒಂದೇದಿನದಲ್ಲಿ ಬೆಂಕಿಅವಘಡ ಸಂಭವಿಸಿದೆ.
ತಾಲೂಕಿನ ವಾಮದಪದವು, ಕರಿಮಲೆ, ದಡ್ಡಲಕಾಡು ಸಮೀಪದ ಬುಡೋಳಿಯಲ್ಲಿ ಸರಕಾರಿ ಗೇರುತೋಟ ಹಾಗೂ ಬಿ.ಸಿ. ರೋಡು ಕೈಕುಂಜದ ರೈಲ್ವೇ ನಿಲ್ದಾಣ ಬಳಿ ಮಂಗಳವಾರ ಅಗ್ನಿ ಅವಘಡ ಸಂಭವಿಸಿದೆ.
ವಾಮದಪದವಿನಲ್ಲಿ ಬಿಸಿಲ ಝಳದ ತೀವ್ರತೆಗೆ ವಿದ್ಯುತ್ ಪರಿವರ್ತಕದಲ್ಲಿ ಕಿಡಿ ಹಾರಿ ಕೆಳಗಡೆ ಇದ್ದ ತರಗೆಲೆಗೆ ಬೆಂಕಿ ತಾಗಿ ಬಳಿಕ ಸುತ್ತಲೂ ಆವರಿಸಿದೆ.
ಬೆಳ್ತಂಗಡಿ ಅಗ್ನಿಶಾಮಕದಳದವರು ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದು ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಮೀನಿನಲ್ಲಿ ಗೇರು ಹಾಗು ಇತರ ಮರಗಳು, ಸಸಿಗಳು ಸುಟ್ಟು ಹೋಗಿವೆ. ಬಂಟ್ವಾಳ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ದಡ್ಡಲಕಾಡು ಸಮೀಪದ ಬುಡೋಳಿಯಲ್ಲು ಸರಕಾರಿ ಜಾಗದ ಗೇರು ತೋಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು,ಹಲವು ಸಸಿಗಳು ಬೆಂಕಿಗಾಹುತಿಯಾಗಿದೆ ಎನ್ನಲಾಗಿದೆ.ಬಂಟ್ವಾಳ ಆಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ ಮಧ್ಯಾಹ್ನದ ಬಳಿಕ ಬಿ.ಸಿ.ರೋಡಿನ ಕೈಕುಂಜ ಸಮೀಪ ರೈಲ್ವೇ ನಿಲ್ದಾಣದ ಬಳಿ ಕಿಡಿಗೇಡಿಗಳ್ಯಾರೋ ಹುಲ್ಲುಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಬೆಂಕಿ ಹತ್ತಿಕೊಂಡಿದ್ದು,ಸುದ್ದಿ ತಿಳಿದ ಬಂಟ್ವಾಳ ಆಗ್ನಿಶಾಮಕದಳದ ಸಿಬ್ಬಂದಿಗಳು ಬೆಂಕಿಯನ್ಮು ನಂದಿಸುವಲ್ಲಿ ಸಫಲರಾಗಿದ್ದಾರೆ.ಕಂದಾಯ ಇಲಾಖಾಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.