
ಕೃಷಿ ಯಂತ್ರೋಪಕರಣ ಹಸ್ತಾಂತರ
ಬಂಟ್ವಾಳ: 2024-25ನೇ ಸಾಲಿನ ಕೃಷಿ ಪರಿಕರಗಳು ಮತ್ತು ಗುಣನಿಯಂತ್ರಣ ಯೋಜನೆಯಡಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬಿ.ಸಿ.ರೋಡಿನಲ್ಲಿ ಫಲಾನುಭವಿಗಳಿಗೆ ಶೇ.50ರ ಸಹಾಯಧನದಲ್ಲಿ ಒಟ್ಟು 27.25 ಲಕ್ಷ ರೂ. ಅನುದಾನದಲ್ಲಿ ಹೈಟೆಕ್ ಹಾರ್ವೆಸ್ಟರ್ ಹಬ್ ಕಾರ್ಯಕ್ರಮದಡಿ, ಹಾರ್ವೆಸ್ಟರ್ ಹಬ್ ಸ್ಥಾಪನೆಗೆ ಯಂತ್ರೋಪಕರಣಗಳನ್ನು ಹಸ್ತಾಂತರಿಸಿದರು.
2 ಕಂಬೈನ್ಡ್ ಭತ್ತ ಕಟಾವು ಯಂತ್ರ, 3 ಭತ್ತ ಹುಲ್ಲು ಕಂತೆ ಮಾಡುವ ಬೇಲರ್ ಯಂತ್ರಗಳನ್ನು ಬಂಟ್ವಾಳ ಕಸಬಾ ಗ್ರಾಮದ ಮೇತಿಕೆದು ನಿವಾಸಿ ಪಶುಪತಿ ಗೌಡ ಅವರಿಗೆ ವಿತರಿಸಲಾಯಿತು.
ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆಯಡಿ ಶೇ.90ರ ಸಹಾಯಧನದಲ್ಲಿ 11 ಮಂದಿ ರೈತರಿಗೆ ತುಂತುರು ನೀರಾವರಿ ಘಟಕಗಳನ್ನು, ಕೇಂದ್ರ ಕೃಷಿ ಯಂತ್ರೋಪಕರಣ ಉಪ ಅಭಿಯಾನ ಯೋಜನೆಯಡಿ 7 ರೈತರಿಗೆ ಪವರ್ ವೀಡರ್ ಮತ್ತು ಓರ್ವ ಫಲಾನುಭವಿಗೆ ಶೇ.50ರ ಸಹಾಯಧನದಲ್ಲಿ ಪವರ್ ಸ್ಪ್ರೇಯರ್ ವಿತರಿಸಲಾಯಿತು.
ಮಂಗಳೂರು ಉಪವಿಭಾಗದ ಉಪಕೃಷಿ ನಿರ್ದೇಶಕರಾದ ಕುಮುದಾ, ಬಂಟ್ವಾಳ ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ ವೀಣಾ ಕೆ.ಆರ್, ಕೃಷಿ ಅಧಿಕಾರಿ ನಂದನ್ ಶೆಣೈ ಪಿ ಉಪಸ್ಥಿತರಿದ್ದರು.
ಬ್ಯಾನರ್ ವಿವಾದ:
ಇದಕ್ಕೂ ಮೊದಲು ಕಾರ್ಯಕ್ರಮ ನಡೆಯುವ ಜಾಗದಲ್ಲಿ ಶಾಸಕ ರಾಜೇಶ್ ನಾಯ್ಕ್ ಚಿತ್ರವಿರುವ ಬ್ಯಾನರ್ ಅನ್ನು ಹಾಕಲಾಗಿತ್ತು. ಅದನ್ನು ಪ್ರಶ್ನಿಸಿದ ಕೆಲವರು ಅಧಿಕಾರಿಗಳ ಬಳಿ ಬ್ಯಾನರ್ ಹಾಕಿದ್ದನ್ನು ಆಕ್ಷೇಪಿಸಿ, ತೆರವುಗೊಳಿಸಲು ಒತ್ತಾಯಿಸಿದನ್ವಯ ಶಾಮಿಯಾನದ ಬಳಿ ಹಾಕಲಾದ ಬ್ಯಾನರ್ ತೆರವುಗೊಳಿಸಲಾಯಿತು. ವಿಷಯ ತಿಳಿದ ಶಾಸಕರು, ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿ, ತಾನು ಜನರಿಂದ ಮತದಾನದ ಮೂಲಕ ಗೆದ್ದು ಶಾಸಕನಾಗಿ ಆಯ್ಕೆಯಾಗಿದ್ದು, ಶಾಸನಸಭೆಯ ಪ್ರತಿನಿಧಿಯೂ ಆಗಿದ್ದೇನೆ. ಇಂಥ ವಿಚಾರಗಳಲ್ಲಿ ರಾಜಕೀಯ ಮಾಡುವುದು ಸೂಕ್ತವಾದುದಲ್ಲ. ನಾನು ಯಾವತ್ತೂ ಅಧಿಕಾರಿಗಳ ಬಳಿ ನನ್ನ ಕೈಯಿಂದಲೇ ವಿತರಣೆ ಮಾಡಬೇಕು ಎಂದು ತಾಕೀತು ಮಾಡಿದವನಲ್ಲ.
ಕೀ ವಿತರಣೆಯನ್ನು ನಾನೇ ಕೊಡಬೇಕೆಂದಿಲ್ಲ, ಯಾರೂ ಕೊಡಬಹುದು, ಇಂಥ ವಿಚಾರದಲ್ಲೂ ಅಧಿಕಾರಿಗಳಿಗೆ ಒತ್ತಡ ಹಾಕಿ ಬ್ಯಾನರ್ ತೆರವುಗೊಳಿಸುವ ಸಣ್ಣತನವನ್ನು ಮಾಡಿದ್ದು ತಿಳಿದುಬಂದಿದ್ದು, ಇದು ಶೋಭೆಯಲ್ಲ, ನನ್ನನ್ನು ಎರಡು ಬಾರಿ ಓಟು ಹಾಕಿ ಗೆಲ್ಲಿಸಿದ ಕಾರಣ ಇಲ್ಲಿ ನಿಂತಿದ್ದೇನೆ, ಸೋತು ನಿಂತದ್ದಲ್ಲ, ಅದನ್ನು ಗಮನಿಸದೆ, ಕೆಲವರು ವಿನಾಃ ಕಾರಣ ಇಂಥ ವಿಚಾರದಲ್ಲೂ ಅಪಸ್ವರ ತೆಗೆದಿರುವುದು ಶೋಭೆಯಲ್ಲ. ಫಲಾನುಭವಿಗಳಿಗೆ ಸರಕಾರದ ಯೋಜನೆಯ ನೆರವು ಹಸ್ತಾಂತರ ಮಾಡುವ ವಿಚಾರದಲ್ಲಿ ಜನರಿಂದ ಚುನಾಯಿತರಾದ ಶಾಸಕರನ್ನು ಕರೆದರೆ ಏಕೆ ಅಸಹನೆಯಾಗುತ್ತದೆ ಎಂದು ಪ್ರಶ್ನಿಸಿದರು.