ಸಾಹಿತ್ಯದ ಲಯ ಅರಿತವನು ಕವಿಯಾಗುತ್ತಾನೆ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

ಸಾಹಿತ್ಯದ ಲಯ ಅರಿತವನು ಕವಿಯಾಗುತ್ತಾನೆ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು


ಉಪ್ಪಿನಂಗಡಿ: ‘ಸಾಹಿತ್ಯಕ್ಕೆ ಒಂದು ಲಯವಿದೆ, ಅದಕ್ಕೆ ಅದರದ್ದೇ ಆದ ರುಚಿಯಿದೆ. ಅದನ್ನರಿತವನು ನಾಳೆ ಕವಿಯಾಗುತ್ತಾನೆ’ ಎಂದು ಕವಿತೆಯ ಹಿಂದಿನ ಮರ್ಮವನ್ನು ಯುವ ಕವಿ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬಿಚ್ಚಿಟ್ಟರು.

ಉಪ್ಪಿನಂಗಡಿ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಇತ್ತೀಚೆಗೆ ಮಂಗಳೂರಿನ ಸಾಹಿತ್ಯಕೂಟ ಆಯೋಜಿಸಿದ್ದ ಸಾಹಿತ್ಯ ಕಲರವ (ಸರಣಿ-2) ಎಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ‘ಕಾವ್ಯಾನುಸಂಧಾನ’ ಎಂಬ ವಿಷಯದ ಕುರಿತು ಮಾತನಾಡಿದ ಅವರು, ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಕುತೂಹಲ ಮೂಡಿಸಿದರು.

ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಇನ್ನೋರ್ವ ಸಂಪನ್ಮೂಲ ವ್ಯಕ್ತಿ, ಹವ್ಯಾಸಿ ಪತ್ರಕರ್ತ ಗುರುಪ್ರಸಾದ್ ಟಿ.ಎನ್., ‘ಬರೆಯುವ ಖುಷಿ’ ಎಂಬ ವಿಷಯವನ್ನಿಟ್ಟುಕ್ಕೊಂಡು ಮಾತನಾಡಿ, ಬರವಣಿಗೆ ಮಕ್ಕಳಲ್ಲಿ ಚಿಂತನಾಶಕ್ತಿಯನ್ನು, ಸೂಕ್ಷ್ಮ ಸಂವೇದನೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಕಳೆದ ಒಂದು ವರ್ಷದಿಂದ ಪ್ರತಿ ತಿಂಗಳೂ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ, ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಸಾಹಿತ್ಯಕೂಟದ ಒಂದನೇ ವರ್ಷದ ಪ್ರಯುಕ್ತ ಈ ಸಾಹಿತ್ಯ ಕಲವರ (ಸರಣಿ-2) ಕಾರ್ಯಕ್ರಮ ಅಯೋಜಿಸಲಾಗಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರವನ್ನು ನಡೆಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ತಂಡದ ಸದಸ್ಯರು ಸಂಗ್ರಹಿಸಿದ ಅರುವತ್ತಕ್ಕೂ ಹೆಚ್ಚಿನ ಪುಸ್ತಕಗಳನ್ನು ಶಾಲಾ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಲಾಯಿತು. ಶಾಲೆಯ ಪ್ರಾಂಶುಪಾಲ ಸತೀಶ್ ಕಾರ್ಯಕ್ರಮಕ್ಕೆ ಶುಭಹಾರೈಸಿ ಸಾಹಿತ್ಯ ಕೂಟವು ಇನ್ನೂ ಉತ್ತಮ ಮಟ್ಟಕ್ಕೆ ಬೆಳೆದು ನಿರಂತರ ಸಾಹಿತ್ಯ ಕಾರ್ಯಕ್ರಮವನ್ನು ನಡೆಸುವಂತಾಗಲಿ ಎಂದು ಹರಸಿದರು.

ಸುಮಧುರ ಕಂಠದಿಂದ ಭಾವಗೀತೆಗಳನ್ನು ಹಾಡುವುದರೊಂದಿಗೆ ಸಾನ್ವಿ ಅವರು ಎಲ್ಲರ ಗಮನಸೆಳೆದರು. ಕಾರ್ಯಕ್ರಮದುದ್ದಕ್ಕೂ ವಿದ್ಯಾರ್ಥಿಗಳು ಲವಲವಿಕೆಯಿಂದ ಬೆರೆತು ಸಾಹಿತ್ಯ ಕಲರವದ ಸೊಬಗನ್ನು ಮತ್ತಷ್ಟು ಹೆಚ್ಚಿಸಿದರು. ತಂಡದ ಸದಸ್ಯರಾದ ರೇಷ್ಮಾ ಬಿ.ಕೆ., ರಂಜಿತ್ ರೈ, ಗುರುಪ್ರಸಾದ್ ಮುಳಿಯಾರು, ರಮಿತ ರೈ ಇವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಾಹಿತ್ಯ ಕಲರವದ ಮೊದಲ ಸರಣಿಯನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆ, ಬಲ್ನಾಡು, ಪುತ್ತೂರಲ್ಲಿ ನಡೆಸಲಾಗಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article