
ಮೂಕಾಂಬಿಕಾ ರೋಡ್ ರೈಲು ನಿಲ್ದಾಣ: ವಿಶ್ರಾಂತಿ ಕೊಠಡಿ ಉದ್ಘಾಟನೆ
ಬೈಂದೂರು: ಪ್ರಯಾಣಿಕರ ಎಲ್ಲಾ ರೀತಿಯ ಸೌಕರ್ಯ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವ ತನ್ನ ಬದ್ಧತೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಕೊಂಕಣ ರೈಲ್ವೆ ನಿಗಮವು ಬೈಂದೂರಿನ ಮೂಕಾಂಬಿಕಾ ರೋಡ್ ನಿಲ್ದಾಣದ ಪ್ಲಾಟ್ ಫಾರ್ಮ್ ನಂ.1ರಲ್ಲಿ ನೂತನ ವಾಗಿ ನಿರ್ಮಿಸಿದ ಕಾರ್ಯನಿರ್ವಾಹಕ ವಿಶ್ರಾಂತಿ ಕೊಠಡಿ (ಎಕ್ಸಿಕ್ಯೂಟಿವ್ ಲಾಂಜ್)ಯನ್ನು ಸೋಮವಾರ ಉದ್ಘಾಟಿಸಲಾಯಿತು.
ಈ ಅತ್ಯಾಧುನಿಕ ಸೌಲಭ್ಯವು ಕೊಂಕಣ ರೆಲ್ವೆಯ ಮೂಲಕ ಬೈಂದೂರು ಹಾಗೂ ತಾಲೂಕಿನ ವಿವಿಧ ಪ್ರಮುಖ ಪ್ರವಾಸಿ ಹಾಗೂ ಆಧ್ಯಾತ್ಮಿಕ ಕೆಂದ್ರಕ್ಕೆ ಆಗಮಿಸುವ ಪ್ರಯಾಣಿಕರ ಪ್ರಯಾಣದ ಅನುಭವವನ್ನು ಹೆಚ್ಚಿಸುವ ಪ್ರಯತ್ನದ ಭಾಗವಾಗಿದೆ ಎಂದು ವಿವಿಧ ಸೌಲಭ್ಯಗಳನ್ನು ಉದ್ಘಾಟಿಸಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ತಿಳಿಸಿದರು.
ಈ ಸಂದರ್ಭದಲ್ಲಿ ಕೊಂಕಣ ರೈಲ್ವೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ (ಸಿಎಂಡಿ) ಸಂತೊಷ್ ಕುಮಾರ್ ಝಾ, ಕಾರವಾರ ಪ್ರಾದೇಶಿಕ ರೈಲ್ವೆಯ್ವ ಪ್ರಬಂಧಕಿ ಆಶಾ ಶೆಟ್ಟಿ, ರೈಲ್ವೆಯ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ದಿಲೀಪ್ ಭಟ್, ಮುಂಬೆ ಉಪಮುಖ್ಯ ವಾಣಿಜ್ಯ ಪ್ರಬಂಧಕ ಆರ್.ಡಿ. ಗೊಲಾಬ್, ಕೊಂಕಣ ರೆಲ್ವೆ ಕಾರವಾರ ಉಪಮುಖ್ಯ ಇಂಜಿನಿಯರ್ ವಿಜಯ್ ಕುಮಾರ್, ಪ್ರಾಂತಿಯ ಸಿಗ್ನಲ್ ಮತ್ತು ಟೆಲಿಕಮ್ಯುನಿಕೇಶನ್ ಇಂಜಿನಿಯರ್ ರಾಹುಲ್ ಬಾಡ್ಕರ್, ಹಿರಿಯ ಪ್ರಾಂತೀಯ ಇಂಜಿನಿಯರ್ ಬಿ.ಎಸ್.ನಡ್ಗೆ, ಕೊಂಕಣ ರೈಲ್ವೆ ಮಂಗಳೂರಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ, ಸಹಾಯಕ ವಾಣಿಜ್ಯ ಪ್ರಬಂಧಕರಾದ ಜಿ.ಡಿ. ಮೀನಾ ಮುಂತಾದವರು ಉಪಸ್ಥಿತರಿದ್ದರು.
ಕಡಿಮೆ ದರದಲ್ಲಿ ಸುಸಜ್ಜಿತ ಸೇವೆ..:
ಬೈಂದೂರು ಮೂಕಾಂಬಿಕಾ ರೋಡ್ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು ಕೊಲ್ಲೂರಿನ ಶ್ರೀಮೂಕಾಂಬಿಕಾ ದೇವಸ್ಥಾನ, ಮರವಂತೆ, ಒತ್ತಿನೆಣೆ ಸಹಿತ ಹಲವು ಧಾರ್ಮಿಕ ಹಾಗೂ ನೈಸರ್ಗಿಕ ಸೌಂದರ್ಯದ ಪ್ರದೇಶಗಳಿಗೆ ಭೇಟಿ ನಿಡುತ್ತಾರೆ. ರೈಲಿನಲ್ಲಿ ಆಗಾಗ್ಗೆ ಪ್ರಯಾಣಿಸುವ ಪ್ರವಾಸಿಗರನ್ನು ಇದು ಆಕರ್ಷಿಸುತ್ತದೆ. ಈ ಸುಸಜ್ಜಿತವಿಶ್ರಾಂತಿ ಕೊಠಡಿಯಲ್ಲಿ, ಪ್ರಯಾಣಿಕರು ತಮ್ಮ ಪ್ರಯಾಣಕ್ಕೆ ಮುನ್ನ ತಂಗಲು ಅವಕಾಶವಿದೆ.
ಈ ವಿಶ್ರಾಂತಿ ಗೃಹವು ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಮೆತ್ತನೆಯ ಸೋಫಾ ಆಸನ, ಉಚಿತ ವೈ-ಫೈ, ಪತ್ರಿಕೆಗಳು ಮತ್ತು ನಿಯತಕಾಲಿಕ ಗಳೊಂದಿಗೆ ಓದುವ ಗ್ಯಾಲರಿ ಮತ್ತು ಮನರಂಜನೆಗಾಗಿ ದೂರದರ್ಶನ ದೊಂದಿಗೆ ಪ್ರಶಾಂತ ವಾತಾವರಣವನ್ನು ನೀಡುತ್ತದೆ. ದಿನದ 24 ಗಂಟೆ ಕಾರ್ಯನಿರ್ವಹಿಸುವ ಕೆಫೆಯು ಪ್ರಯಾಣಿಕರಿಗೆ ಎಲ್ಲಾ ಸಮಯದಲ್ಲೂ ಉಪಾಹಾರ ಪೂರೆಸುತ್ತದೆ. ಮೊಬೈಲ್ ಸಾಧನಗಳು ಮತ್ತು ಲ್ಯಾಪ್ಟಾಪ್ ಗಳಿಗೆ ಇಲ್ಲಿ ಚಾರ್ಜಿಂಗ್ ಸೌಲಭ್ಯ ಲಭ್ಯವಿದೆ.
ಈ ಆಧುನಿಕ ಸೌಲಭ್ಯ ಪ್ರಯಾಣಿಕರಿಗೆ ವಿಶ್ರಾಂತಿ ಮತ್ತು ಆರಾಮದಾಯಕವಾಗಿ ಆಯಾಸವನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ. ಈ ಕಾರ್ಯನಿರ್ವಾಹಕ ವಿಶ್ರಾಂತಿ ಗೃಹವು ಗಂಟೆಗೆ ಕೇವಲ 50 ರೂ.ಗಳ ದರದಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.